

ನರಗುಂದ: ಪಟ್ಟಣದ ಲಯನ್ಸ್ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಸತ್ಯನಾರಾಯಣ ಪೂಜೆ, ಸಂಸ್ಥೆಯ ಚೇರ್ಮನ್, ಶಾಸಕ ಸಿ.ಸಿ. ಪಾಟೀಲ ಅವರ ಜನ್ಮದಿನ, ಸನ್ಮಾನ ಸಮಾರಂಭ ನಡೆಯಿತು.
ಸಿ.ಸಿ.ಪಾಟೀಲ ಅವರು ಮಾತನಾಡಿ, ಲಯನ್ಸ್ ಶಿಕ್ಷಣ ಸಂಸ್ಥೆ ರಾಜ್ಯದ ಹೆಮ್ಮೆಯ ಶಿಕ್ಷಣ ಸಂಸ್ಥೆಯಾಗಿದೆ. ಸಾಕಷ್ಟು ಪ್ರತಿಭಾವಂತರನ್ನು ರೂಪಿಸಿದೆ. ಶಿಕ್ಷಕರು ಸಮರ್ಥವಾಗಿ ಬೋಧಿಸಬೇಕು. ಮಕ್ಕಳಿಗೆ ನೈತಿಕ ಶಿಕ್ಷಣ ನೀಡಿದಾಗ ಮಾತ್ರ ಅವರು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ಶಿಕ್ಷಕರು ತಮ್ಮನ್ನು ತಾವು ಅರಿತು ಮಕ್ಕಳ ಸಾಮರ್ಥ್ಯ ಅರಿತು ಬೋಧಿಸಬೇಕು. ಆಗ ಶಿಕ್ಷಕ ಹುದ್ದೆಗೆ ಸಾರ್ಥಕತೆ ದೊರೆಯುತ್ತದೆ. ನಾವು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ಧೆ ಇದ್ದಾಗ ಯಶಸ್ಸು ಹೊಂದಲು ಸಾಧ್ಯವಿದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಪ್ರದಾಯ ರೂಡಿಸಿ ಅವರ ಏಳಿಗೆಗೆ ಸದಾ ಹಾತೊರೆಯುತ್ತಿರಬೇಕು. ಎಲ್ಲರೂ ಮಕ್ಕಳ ಶ್ರೇಯೋಭಿವೃದ್ಧಿಗೆ ಕಾರಣವಾಗುವಂತೆ ಸಿ.ಸಿ. ಪಾಟೀಲ ಹೇಳಿದರು.
ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ ಮಾತನಾಡಿ, ಲಯನ್ಸ್ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈಯುತ್ತಿದೆ ಎಂದರು. ಹಿರಿಯ ನಿರ್ದೇಶಕ ಡಾ.ಬಿ.ಎಂ. ಜಾಬಣ್ಣವರ ಮಾತನಾಡಿ, ಸಿ.ಸಿ. ಪಾಟೀಲರ ಕಾರ್ಯ ವಿವರಿಸಿ ಅವರು ಬೆಳೆದು ಬಂದ ದಾರಿ ತಿಳಿಸಿದರು. ಅವರು ಯುವಕರಿಗೆ ಮಾದರಿಯಾಗಿದ್ದಾರೆ, ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಚಿದಂಬರ ಪುರೋಹಿತ ಅವರು ಸತ್ಯನಾರಾಯಣ ಪೂಜಾ ಕೈಂಕರ್ಯ ನೆರವೇರಿಸಿದರು. ನಿರ್ದೇಶಕರಾದ ಜಿ.ಬಿ. ಕುಲಕರ್ಣಿ, ಸಿ.ಎಸ್. ಸಾಲೂಟಗಿಮಠ, ಎಸ್.ಎಸ್. ಪಾಟೀಲ, ಜೆ.ವಿ. ಕಂಠಿ, ರಾಘವೇಂದ್ರ ಆನೆಗುಂದಿ., ಡಾ. ಪ್ರಭು ನಂದಿ, ವಿಜಯಕುಮಾರ ಬೇಲೇರಿ, ಮುಖ್ಯ ಶಿಕ್ಷಕ ಜಿ.ಬಿ. ಹಿರೇಮಠ, ಪ್ರೇರಣಾ ಪಾತ್ರಾ ಇದ್ದರು. ಡಾ. ಬಸವರಾಜ ಹಲಕುರ್ಕಿ ನಿರೂಪಿಸಿ, ವಂದಿಸಿದರು.