

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಥಿರ್ಕವಾಗಿ ಹಿಂದುಳಿದು ಜೀವನೋಪಾಯ ಕಂಡುಕೊಳ್ಳಲು ಪರಿತಪಿಸುತ್ತಿರುವ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ನಂತರ ಐಟಿಐ ತರಬೇತಿ ಅತ್ಯುತ್ತಮ ಆಯ್ಕೆ. ಮಕ್ಕಳು ಕೇವಲ ವಿದ್ಯಾಭ್ಯಾಸ ಮಾಡಿದರೆ ಸಾಲದು. ಜೀವನ ನಿರ್ವಹಣೆ ಮಾಡುವುದನ್ನು ಕಲಿಯಬೇಕು. ಅಂತಹ ಕೌಶಲವನ್ನು ಐಟಿಐ ತರಬೇತಿ ನೀಡುತ್ತದೆ ಎಂದು ಜೆಎಸ್ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ಜೆಎಸ್ಎಸ್ನ ಶ್ರೀ ಮಂಜುನಾಥೇಶ್ವರ ಹಾಗೂ ಜೆಎಸ್ಎಸ್ ಕೌಶಲ ತರಬೇತಿ ಸಂಸ್ಥೆಗಳ ಆಶ್ರಯದಲ್ಲಿ ಐಟಿಐ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಒಬ್ಬ ವಿದ್ಯಾರ್ಥಿ ತನ್ನ ಯಶಸ್ಸನ್ನು ಪಡೆಯಬೇಕಾದರೆ ಆತನಿಗೆ ನೈತಿಕ ಶಿಕ್ಷಣ ದೊರೆಯಬೇಕು. ಅಂದಾಗಲೇ ಆತನಿಗೆ ಒಳಿತು, ಕೆಡಕುಗಳ ದರ್ಶನವಾಗುತ್ತದೆ. ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಕ್ಕೆ ಅತಿ ಹೆಚ್ಚು ಅವಕಾಶಗಳಿವೆ. ಕಲಿಕಾ ಅವಧಿಯಲ್ಲೇ ವಿವಿಧ ಕಂಪನಿಗಳಲ್ಲಿ ಆನ್ಜಾಬ್ ಟ್ರೇನಿಂಗ್ ನಿಯೋಜಿಸಿ ಹೆಚ್ಚಿನ ತಾಂತ್ರಿಕ ತರಬೇತಿ, ಕಲಿಕೆ ನಂತರ ಉದ್ಯೋಗ ಆಯ್ಕೆ ಸೇರಿ ಇತರ ವಿಷಯಗಳ ಬಗ್ಗೆ ತಿಳಿಸಲಾಗುತ್ತದೆ. ಇದರ ಸದುಪಯೋಗ ಪಡೆಯಬೇಕು ಎಂದರು.
ನಿವೃತ್ತ ಪ್ರಾಧ್ಯಾಪಕ ಸುರೇಶ ಕುಲಕರ್ಣಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ಒಂದೇ ಕ್ಷಣದಲ್ಲಿ ವಿಕಸನವಾಗುವಂತಹದ್ದಲ್ಲ. ಎಲ್ಲ ಮಕ್ಕಳಿಗೂ ಒಂದೇ ತರಹದ ಮೆದುಳು ಇರುತ್ತದೆ. ಯಾವ ರೀತಿ ವಿಚಾರಗಳನ್ನು ಅವರಲ್ಲಿ ತುಂಬುತ್ತೇವೆಯೋ ಹಾಗೇ ಅವರ ಬೆಳವಣಿಗೆ ಆಗುತ್ತದೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ ಕಲಿಸಬೇಕು. ಶಿಸ್ತು, ಸಂಯಮ, ಸಮಯ ಪ್ರಜ್ಞೆ, ಉತ್ತಮ ಆಲೋಚನೆಗಳು, ಉತ್ತಮ ಶರೀರ ವಿದ್ಯಾರ್ಥಿಯ ವ್ಯಕ್ತಿತ್ವ ರೂಪಿಸುತ್ತವೆ ಎಂದರು.
ವಿನಾಯಕ ಗವಳಿ, ದೀಪಾ ಕುಲಕರ್ಣಿ, ಪಾಲಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಐಟಿಐ ಕಾಲೇಜಿನ ಪ್ರಾಚಾರ್ಯ ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಮಂಜುನಾಥ ಚಟ್ಟೇರ ನಿರೂಪಿಸಿದರು. ವಿದ್ಯಾ ಹಿರೇಮಠ ವಂದಿಸಿದರು.