

ನವಲಗುಂದ : ತಾಲೂಕಿನ ಮೊರಬ ಗ್ರಾಮದಲ್ಲಿ ಗುರುವಾರದಂದು ಉಚಿತ ನೇತ್ರ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಲಾಗಿತ್ತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ, ಹುಬ್ಬಳ್ಳಿಯ ಡಾ. ಎಂ.ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿಬಿರ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಡಿವೆಪ್ಪ ಮನಮಿ, ಕಣ್ಣು ಮಾನವನ ದೇಹದ ಅತಿ ಸೂಕ್ಷ್ಮವಾದ ಅಂಗವಾಗಿದ್ದು, ಅತೀ ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಡ ಜನರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳು ಅನುಕೂಲವಾಗಿವೆ. ಇಂದಿನ ಒತ್ತಡದ ಜೀವನ, ಆಹಾರ ಕ್ರಮದಿಂದ ನಿತ್ಯ ಆರೋಗ್ಯದಲ್ಲಿ ವೈಪರೀತ್ಯ ಕಾಣುತ್ತಿದ್ದೇವೆ. ಪ್ರತಿಯೊಬ್ಬರು ಎರಡ್ಮೂರು ತಿಂಗಳಿಗೆ ಒಂದು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಾ. ಡಾ. ಎಂ.ಎಂ. ಜೋಶಿ ಆಸ್ಪತ್ರೆಯ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಶಿಬಿರದ ಉದ್ದೇಶ ತಿಳಿಸಿದರು.
ಸಾನಿಧ್ಯ ವಹಿಸಿದ್ದ ಆನಂದಯ್ಯ ಹಿರೇಮಠ ಸ್ವಾಮೀಜಿ ಮಾತನಾಡಿ, ಸಮಯೋಚಿತವಾಗಿ ನೇತ್ರ ತಪಾಸಣೆ ಮಾಡಿಸಿಕೊಂಡು ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಮೊರಬ ಗ್ರಾಮದಲ್ಲಿ ಅಂಧತ್ವ ಮತ್ತು ದೃಷ್ಟಿ ಹೀನತೆಯ ನಿಯಂತ್ರಣಕ್ಕಾಗಿ ಎಂ.ಎಂ. ಜೋಶಿ ಆಸ್ಪತ್ರೆ ವತಿಯಿಂದ ‘ದೃಷ್ಟಿ ಕೇಂದ್ರ’ ತೆರೆಯುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
ತಪಾಸಣೆಗೊಳಗಾದ ಸುಮಾರು 200 ಶಿಬಿರಾರ್ಥಿಗಳಲ್ಲಿ 50 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಡಾ. ಎಂ. ಎಂ. ಜೋಶಿ ಆಸ್ಪತ್ರೆಯ ನುರಿತ ವೈದ್ಯರು ಶಿಬಿರಾರ್ಥಿಗಳ ಕಣ್ಣಿನ ಪರೀಕ್ಷೆ ನಡೆಸಿದರು.
ಕ್ಷಮತಾ ಸಂಚಾಲಕ ಗೋವಿಂದ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊರಬ ಗ್ರಾಪಂ ಅಧ್ಯಕ್ಷೆ ಪಾರ್ವತೆವ್ವ ಜಾಲಿಹಾಳ, ಉಪಾಧ್ಯಕ್ಷ ಶಿವಯೋಗಿ ಮನಮಿ, ಗ್ರಾಮದ ಪ್ರಮುಖರಾದ ಶರಣಪ್ಪಗೌಡ ದಾನಪ್ಪಗೌಡ, ಈರಣ್ಣ ಕೆರೆಮನಿ, ಬಸವರಾಜ ದವಟೆ, ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಮುರಲೀಧರ ಮಳಗಿ, ಚಂದ್ರಶೇಖರ ಬೆಳವಾಡಿ, ನಿಂಗಪ್ಪ ಜಾಲಿಹಾಳ, ವಿಜಯಕುಮಾರ ಪಾಟೀಲ ಹಾಗೂ ಮೊರಬ ಗ್ರಾಮ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.