ಆಸಕ್ತಿಯ ವೃತ್ತಿಯಾದ ವಕೀಲಿಕೆ,  ಕರ್ನಾಟಕ ಹೈಕೋರ್ಟ ನಿವೃತ್ತ ನ್ಯಾಯಾಧೀಶ ಬಿ.ಎ. ಪಾಟೀಲ ಅಭಿಮತ,  10ನೇ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಉದ್ಘಾಟನೆ

IMG_20250104_113850_823-1.jpg
Published on

ಹುಬ್ಬಳ್ಳಿ: ವಕೀಲಿಕೆ ಎಂಬುದು ಈಗ ಬಹಳ ಆಸಕ್ತಿದಾಯಕ ವೃತ್ತಿಯಾಗಿ ಹೊರಹೊಮ್ಮಿದೆ. ಮೊದಲೆಲ್ಲ ಮುಖ್ಯವಾಹಿನಿಯ ಕೋರ್ಸ್ ಗಳು ಸಿಗದೇ ಇದ್ದಾಗ ಕೊನೆಯದಾಗಿ ಆಯ್ದುಕೊಳ್ಳುತ್ತಿದ್ದ ಕಾನೂನು ಪದವಿಯು ಇಂದಿನ ವಿದ್ಯಾರ್ಥಿಗಳ ಪ್ರಾಶಸ್ತ್ಯದ ಅಧ್ಯಯನವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಹಾಗೂ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ಬಿ.ಎ. ಪಾಟೀಲ್ ಅಭಿಪ್ರಾಯಪಟ್ಟರು.

ಇಲ್ಲಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕಲ್ಪಿತ ನ್ಯಾಯಾಲಯ ಸ್ಪರ್ಧೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಪಿತ ನ್ಯಾಯಾಲಯ ಪರಿಕಲ್ಪನೆಯನ್ನು ಗಂಭೀರವಾಗಿ ಪರಿಗಣಿಸಿ ಇದರಲ್ಲಿ ಪಾಲ್ಗೊಂಡು ಸಮರ್ಪಕ ವಾದ ಮಂಡನೆಯ ಕಲೆ ಕರಗತ ಮಾಡಿಕೊಂಡರೆ ವಿದ್ಯಾರ್ಥಿಗಳಿಗೆ ಪದವಿ ಮುಗಿಸಿ ಹೊರಬರುತ್ತಿದ್ದಂತೆ ಬಹುದೊಡ್ಡ ಅವಕಾಶಗಳು ಸಿಗುತ್ತವೆ. ಹಾಗಾಗಿ ಸೋಲು ಗೆಲುವಿನ ಬಗ್ಗೆ ಚಿಂತಿಸದೇ ಸ್ಪರ್ಧೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿ, ಖಾಸಗೀಕರಣ, ಉದಾರೀಕರಣ ಮತ್ತು ಜಾಗತೀಕರಣದಿಂದಾಗಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಂತ್ರಜ್ಞಾನ ಸಹ ಅಭಿವೃದ್ಧಿ ಹೊಂದಿದೆ. ಹಾಗಾಗಿ ವಕೀಲಿ ವೃತ್ತಿಗೆ ಬಹಳಷ್ಟು ಬೇಡಿಕೆ ಇದೆ. ವೃತ್ತಿ ಗೌರವ ಉಳಿಸಿ ಬೆಳೆಸಬೇಕಾದರೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.

ಸ್ಪರ್ಧೆಯಲ್ಲಿ ಗೋವಾ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಮತ್ತು ಆಂಧ್ರಪ್ರದೇಶ ರಾಜ್ಯಗಳು ಹಾಗೂ ಬೆಂಗಳೂರು, ಮೈಸೂರು, ವಿಜಯಪುರ, ಬೆಳಗಾವಿ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಕಾನೂನು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಿಂಡಿಕೇಟ್ ಸದಸ್ಯ ಡಾ. ಎಚ್.ವಿ. ಬೆಳಗಲಿ, ಕುಲಸಚಿವೆ ಅನುರಾಧ ವಸ್ತದ, ಮೌಲ್ಯಮಾಪನ ಕುಲಸಚಿವೆ ಡಾ. ರತ್ನಾ ಭರಮಗೌಡರ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಚನಾ ಕೆ., ಐ.ಬಿ. ಬಿರಾದಾರ, ಗಿರೀಶಗೌಡ ಪಾಟೀಲ, ವಿಶ್ವವಿದ್ಯಾಲಯ ಉಪನ್ಯಾಸಕರು,  ಉಪಸ್ಥಿತರಿದ್ದರು.

ಶ್ರೇಯಾ ಕೊಂಬ್ಳಿ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭೀಮಾಬಾಯಿ ಮುಲಗೆ ಸ್ವಾಗತಿಸಿದರು. ದರ್ಶನ ಬಾಲಿವಾಡ ಸ್ಪರ್ಧೆಗೆ ಆಗಮಿಸಿದ ತಂಡಗಳನ್ನು ಪರಿಚಯಿಸಿದರು. ಅನನ್ಯಾ ಕೋಲ್ಹಾರ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸುನೀಲ ಬಗಾಡೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net