3 ವರ್ಷದಲ್ಲಿ ಜಲ ಯೋಜನೆ ಸಾಕಾರ: ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಸೂಚನೆ

26 rama dcm neeravari
Published on

ರಾಮನಗರ: ಶ್ರೀರಂಗ ಏತ ನೀರಾವರಿ, ಸತ್ತೇಗಾಲ ಕುಡಿಯುವ ನೀರು ಯೋಜನೆ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದರು.

ರಾಮನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ನೀರಾವರಿ ಮತ್ತು ಕುಡಿಯುವ ನೀರು ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಬುಧವಾರ ಬೆಂಗಳೂರಿನಲ್ಲಿ ಕರೆದಿದ್ದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಶ್ರೀರಂಗ ಸೇರಿದಂತೆ ಹಲವು ಯೋಜನೆಗಳಿಗೆ ಭೂಸ್ವಾಧೀನದ ಸಮಸ್ಯೆ ಇದೆ. ಅದನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ತಿಳಿಸಿದ ಅವರು ಯಾವುದೇ ಕಾರಣಕ್ಕೂ ಕುಡಿಯುವ ಮತ್ತು ನೀರಾವರಿ ಯೋಜನೆಗಳು ವಿಳಂಬವಾಗದಂತೆ ಎಚ್ಚರವಹಿಸಲು ಸೂಚಿಸಿದರು. ಈ ಸಂಬಂಧ ತುಮಕೂರು ಮತ್ತು ರಾಮನಗರ ಜಿಲ್ಲಾಧಿಕಾರಿಗಳ ಜತೆ ಸಭೆ ನಡೆಸುವಂತೆಯೂ ಅವರು ಆದೇಶಿಸಿದರು.

ಮಾಗಡಿ ತಾಲೂಕಿಗೆ ಕುಡಿಯುವ ನೀರು ಸರಬರಾಜು ಮಾಡುವ ಶ್ರೀರಂಗ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣಗೊಳಿಸಬೇಕೆನ್ನುವ ಖಡಕ್ ಸೂಚನೆಯನ್ನು ಉಪಮುಖ್ಯಮಂತ್ರಿ ನೀಡಿದರು. ಇದಕ್ಕೆ ಮುಖ್ಯ ಇಂಜಿನಿಯರ್ ಬಾಲಕೃಷ್ಣ ಒಪ್ಪಿಗೆ ಸೂಚಿಸಿದರು. ಭೂಸ್ವಾಧೀನ ಪ್ರಕ್ರಿಯೆಗೆ ಎದುರಾಗಿರುವ ತೊಡಕುಗಳ ಬಗ್ಗೆ ಇನ್ನೊಂದು ವಾರದಲ್ಲಿ ಕಂದಾಯ ಇಲಾಖೆ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದರು.

ಅರ್ಕಾವತಿ ಜಲಾಶಯದ ಹಿನ್ನೀರಿನಿಂದ ಕನಕಪುರ ತಾಲೂಕಿನ ಗರಳಾಪುರ ಹಾಗೂ ಇನ್ನಿತರ 12 ಕೆರೆಗಳಿಗೆ ಎರಡು ಹಂತಗಳಲ್ಲಿ ನೀರು ತುಂಬಿಸಲು 70 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದು, ಇದಕ್ಕೂ ಭೂಸ್ವಾಧೀನದ ಸಮಸ್ಯೆ ಇದೆ. ತಕ್ಷಣ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸುವುದಾಗಿ ಡಿಸಿಎಂ ತಿಳಿಸಿದರು.

ಒಟ್ಟು 540 ಕೋಟಿ ರೂಪಾಯಿ ವೆಚ್ಚದ ಸತ್ತೇಗಾಲ ಕುಡಿಯುವ ನೀರು ಯೋಜನೆ ಪ್ರಗತಿಯಲ್ಲಿದ್ದು, ಇದರಿಂದ ಮೊಗೇನಹಳ್ಳಿ ಕೆರೆ ಮತ್ತು ಕಣ್ವ ಜಲಾಶಯಕ್ಕೆ ನೀರನ್ನು ತುಂಬಿಸಲಾಗುತ್ತದೆ. ಪುನಃ ಅಲ್ಲಿಂದ ಮಂಚನಬೆಲೆ ಜಲಾಶಯ ಮತ್ತು ವೈ.ಜಿ.ಗುಡ್ಡ ಕೆರೆಗೆ ತಂದು ಅದನ್ನು ನಾಲ್ಕು ತಾಲೂಕುಗಳಿಗೂ ಕುಡಿಯುವ ನೀರನ್ನು ಒದಗಿಸಲಾಗುತ್ತದೆ. ಸದ್ಯದಲ್ಲೇ ಈ ಯೋಜನೆಯ ಪ್ರಗತಿಯನ್ನು ಖುದ್ದು ಪರಿಶೀಲಿಸಲಾಗುವುದು ಎಂದ ಸಚಿವರು ನೀರು ಸರಬರಾಜಿಗೆ ಸುರಂಗ ನಿರ್ಮಾಣ ನಡೆಯುತ್ತಿರುವ ಮಾಹಿತಿ ಪಡೆದುಕೊಂಡರು.

ಗರಕಹಳ್ಳಿ ಏತ ಯೋಜನೆ, ಸಾತನೂರು ಕೆರೆ ತುಂಬಿಸುವ ಯೋಜನೆ, ನಾರಾಯಪುರ ಕೆರೆ ತುಂಬಿಸುವ ಯೋಜನೆ, ಕೆಂಗೇರಿ ದೊಡ್ಡಬೆಲೆ ಏತ ಯೋಜನೆ, ಬೈರಮಂಗಲ ತಿರುವು ನಾಲಾ ಯೋಜನೆ, ಕಣ್ವ ನಾಲೆಗಳ ಆಧುನೀಕರಣ ಯೋಜನೆ, ಅರೆಕೊಪ್ಪ ಸೂಕ್ಷ್ಮ ನೀರಾವರಿ, ಹೆಗ್ಗನೂರು ಸೂಕ್ಷ್ಮ ನೀರಾವರಿ, ದೊಡ್ಡಾಲಹಳ್ಳಿ ಹನಿ ನೀರಾವರಿ ಯೋಜನೆಗಳ ಪ್ರಗತಿ ಬಗ್ಗೆಯೂ ಉಪ ಮುಖ್ಯಮಂತ್ರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net