ಶ್ರೀ ಸುತ್ತೂರು ಶಾಖಾ ಮಠದಲ್ಲಿ ಬೆಳದಿಂಗಳ ಸಂಗೀತ-269

set-of-musical-instruments-in-doodle-style-violin-guitar-synthesizer-drum-electric-guitar-and-saxophone-vector
Published on

ಮೈಸೂರು: ವಿದುಷಿ ಹರಿಣಿ ರಮೇಶ್ ಅವರು ಜು.21ರಂದು ಸಾಂಸ್ಕೃತಿಕ ನಗರಿಯಲ್ಲಿ ಸಂಗೀತದ ಕಂಪು ಚೆಲ್ಲಲಿದ್ದಾರೆ. ಜತೆಗೆ ಇದೇ ವೇಳೆ ಹಿರಿಯ ಪತ್ರಕರ್ತ ಎ.ಆರ್. ರಘುರಾಮ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಸಂಜೆ 5.30 ಗಂಟೆಗೆ ಬೆಳದಿಂಗಳ ಸಂಗೀತ-269 ರ ಅಂಗವಾಗಿ ಚಾಮುಂಡಿಬೆಟ್ಟದ ತಪ್ಪಲಿನ ಶ್ರೀ ಸುತ್ತೂರು ಶಾಖಾ ಮಠದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆ ಹರಿಸಲಿದ್ದಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇವರಿಗೆ ವಿದ್ವಾನ್ ವಿದ್ವಾನ್ ಕೇಶವ ಮೋಹನ್‌ಕುಮಾರ್(ವಯೋಲಿನ್), ವಿದ್ವಾನ್ ಎ.ರಾಧೇಶ್(ಮೃದಂಗ) ಹಾಗೂ ವಿದ್ವಾನ್ ಎಸ್.ಮಂಜುನಾಥ್(ಘಟಂ) ಸಾಥ್ ನೀಡಲಿದ್ದಾರೆ.

ವಿದುಷಿ ಹರಿಣಿ ರಮೇಶ್ ಕರ್ನಾಟಕ ಸಂಗೀತದ ಉದಯೋನ್ಮುಖ ಕಲಾವಿದರಲ್ಲೊಬ್ಬರು. ತಂದೆ ಎಚ್.ಕೆ.ರಮೇಶ್, ತಾಯಿ ಲತಾ. ಪ್ರಾರಂಭಿಕ ಶಿಕ್ಷಣ ವಿದುಷಿ ಎಂ.ಜಿ. ಲಕ್ಷ್ಮೀ ಅವರ ಬಳಿ ಆರನೇ ವಯಸ್ಸಿನಲ್ಲಿ ಪ್ರಾರಂಭವಾಗಿ, ಅನಂತರ ವಿದುಷಿ ಸುಕನ್ಯಾ ಪ್ರಭಾಕರ್ ಬಳಿ ಎಂಟು ವರ್ಷ ಕಾಲ ಸಂಗೀತ ಅಭ್ಯಾಸ ಮಾಡಿದರು. ಕಳೆದ ಒಂಬತ್ತು ವರ್ಷಗಳಿಂದ ಚೆನ್ನೈನಲ್ಲಿ ಕಲಾವಿದರಾದ ವಿದುಷಿ ರಂಜನಿ ಮತ್ತು ವಿದುಷಿ ಗಾಯತ್ರಿ ಬಳಿ ಉನ್ನತ ತರಬೇತಿ ಪಡೆದು ಉತ್ತಮ ಕಲಾವಿದರಾಗಿ ರೂಪುಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ಸಂಗೀತ ವಿದ್ವತ್ ಪರೀಕ್ಷೆಯಲ್ಲಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಿ.ಕಾಂ. ಪದವೀಧರರು. ಚೆನ್ನೈನ ತ್ಯಾಗಬ್ರಹ್ಮ ಗಾನ ಸಭಾ, ಬೆಂಗಳೂರಿನ ಗಾಯನ ಸಮಾಜ, ಮೈಸೂರಿನ ನಾದಬ್ರಹ್ಮ ಸಂಗೀತ ಸಭಾ, ಸಚ್ಚಿದಾನಂದ ಆಶ್ರಮ, ಬಿಡಾರಂ ರಾಮ ಮಂದಿರ, ಶೃಂಗೇರಿಯ ಶಾರದಾ ಪೀಠ ಮತ್ತು ಉಡುಪಿಯ ಶ್ರೀಕೃಷ್ಣ ಮಠ, ಜೆಎಸ್‌ಎಸ್ ಸಂಗೀತ ಸಭಾ ಮುಂತಾದ ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರ ಪ್ರತಿಭೆ ಮತ್ತು ವಿದ್ವತ್ತಿಗಾಗಿ ಹಲವು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಮೈಸೂರಿನ ಶ್ರುತಿ ಮಂಜರಿ ಪ್ರತಿಷ್ಠಾನದ ರಾಗ, ತಾಳ, ಪಲ್ಲವಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಬೆಂಗಳೂರಿನ ಕಮಲಾ ಟಿ.ಅವಧಾನಿ ಫೌಂಡೇಷನ್‌ನ ಸ್ಪರ್ಧೆಯಲ್ಲಿ ಬಹುಮಾನ, ಆಕಾಶವಾಣಿಯ ರಾಷ್ಟ್ರೀಯ ಸಂಗೀತ ಸ್ಪರ್ಧೆಯಲ್ಲಿ ಕರ್ನಾಟಕ ಸಂಗೀತ ವಿಭಾಗದಲ್ಲಿ ದ್ವಿತೀಯ ಬಹುಮಾನ ಗಳಿಸಿದ್ದಾರೆ. ಆಕಾಶವಾಣಿಯ ಎ ಶ್ರೇಣಿ ಕಲಾವಿದರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net