

ತಾಳಿಕೋಟೆ: ವಿದೇಶಿ ಕ್ರೀಡೆಗಳ ಭರಾಟೆಯಲ್ಲಿ ಜಾನಪದ ಸೊಗಡಿನ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಸಹಕಾರಿಯಾಗಿರುವ ಗ್ರಾಮೀಣ ಕ್ರೀಡೆಗಳ ರಕ್ಷಣೆಗೆ ಯುವ ಸಮೂಹ ಮುಂದಾಗಬೇಕಿದೆ ಎಂದು ಅಸ್ಕಿ ಫೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.
ತಾಲೂಕಿನ ಮೂಕಿಹಾಳದ ಹಜರತ್ ಅಲ್ಲಾವುದ್ದೀನ ಅನ್ಸಾರಿ ಉರ್ ಲಾಡ್ಲೇಮಶ್ಯಾಕ ದರ್ಗಾ ಉರುಸಿನ (ಜಾತ್ರೆ) ಅಂಗವಾಗಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಬ್ಬಡ್ಡಿ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯುವ ಸಮೂಹ ಕ್ರಿಕೆಟ್‌ಗೆ ಮತ್ತು ಮೊಬೈಲ್‌ಗೆ ನೀಡುತ್ತಿರುವ ಪ್ರಾಧಾನ್ಯತೆಯನ್ನು ಗ್ರಾಮೀಣ ಸೊಗಡಿನ ಕಬಡ್ಡಿ, ಖೋಖೋಗಳಿಗೆ ನೀಡಬೇಕು ಎಂದರು. ಸಮಾಜ ಸೇವಕ ವೀರೇಶಗೌಡ ಬಾಗೇವಾಡಿ (ಮಿಣಜಗಿ), ಯುವ ಮುಖಂಡ ಶಿವರಾಜ ಗುಂಡಕನಾಳ ಮಾತನಾಡಿದರು.
ಕ್ರೀಡಾಕೂಟದಲ್ಲಿ ವಿಜೇತರಿಗೆ ಪ್ರಥಮ ಬಹುಮಾನ 51 ಸಾವಿರ ರೂ. ವನ್ನು ಅಸ್ಕಿ ಫೌಂಡೇಷನ್ ವತಿಯಿಂದ ಸಿ.ಬಿ.ಅಸ್ಕಿ ಅವರು ಘೋಷಿಸಿದರು. ದ್ವಿತೀಯ ಬಹುಮಾನವನ್ನು ಸಮಾಜ ಸೇವಕ ವೀರೇಶಗೌಡ ಬಾಗೇವಾಡಿ 31 ಸಾವಿರ ರೂ. ಹಾಗೂ ತೃತೀಯ ಬಹುಮಾನ ಗುತ್ತಿಗೆದಾರ ಎಚ್.ಎಂ.ನಾಯಕ 21 ಸಾವಿರ, ನಾಲ್ಕನೇ ಬಹುಮಾನ ಅವಟಿ ಸರ್ ಗೆಳೆಯರ ಬಳಗದಿಂದ 10 ಸಾವಿರ ರೂ. ಘೋಷಿಸಲಾಯಿತು.
ಲಾಡ್ಲೇಮಶ್ಯಾಕ ದರ್ಗಾ ಕಮಿಟಿ ಅಧ್ಯಕ್ಷ ಕೆ.ಎಚ್.ಪಾಟೀಲಪಟೇಲ, ಪ್ರಥಮ ದರ್ಜೆ ಗುತ್ತಿಗೆದಾರ ಎಚ್.ಎಂ.ನಾಯಕ, ಪತ್ರಕರ್ತ ಅಂಬಾಜಿ ಜಿ ಘೋರ್ಪಡೆ, ಹುಮಾಯುನ್ ಪಟೇಲಬಿರಾದಾರ, ರಿಯಾಜ ಪಟೇಲ ಇದ್ದರು. ಶಿಕ್ಷಕ ರಾಜು ಗಣಾಚಾರಿ ನಿರೂಪಿಸಿದರು.