ಭಕ್ತರ ಇಷ್ಟಾರ್ಥ ಈಡೇರಿಸುವ ಮೂಕಪ್ಪ ಶ್ರೀಗಳು

Mookappa Shri
Published on

ಬ್ಯಾಡಗಿ: ಮೂಕಪ್ಪ ಶ್ರೀಗಳು ಗೋ ಮಾತೆಯ ಗರ್ಭದ ಮೂಲಕ ನಂದಿಯಾಗಿ ಭೂಲೋಕದಲ್ಲಿ ಅವತರಿಸಿ, ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ. ಶ್ರಾವಣಮಾಸದಲ್ಲಿ ವೃಷಭರೂಪಿ ಮೂಕಪ್ಪ ಸ್ವಾಮಿಗಳ ದರ್ಶನದಿಂದ ಸಾಕಷ್ಟು ಪುಣ್ಯಫಲಗಳು ಪ್ರಾಪ್ತಿಯಾಗುತ್ತದೆ ಎಂದು ಮುಪ್ಪಿನಸ್ವಾಮಿ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಸ್ಥಳೀಯ ಮುಪ್ಪಿನಸ್ವಾಮಿ ಮಠದಲ್ಲಿ ಶ್ರಾವಣಮಾಸದ ನಿಮಿತ್ತ ಭಾನುವಾರ ಹಮ್ಮಿಕೊಂಡಿದ್ದ ಗುಡ್ಡದಮಲ್ಲಾಪುರ ಷ.ಬ್ರ. ಮೂಕಪ್ಪ ಸ್ವಾಮಿಗಳ ದರ್ಶನ ಹಾಗೂ ವಿಶೇಷ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಸವಾದಿ ಶರಣರ ಕಾಲದಿಂದಲೂ ಗುಡ್ಡದಮಲ್ಲಾಪುರದ ಷ.ಬ್ರ. ಮೂಕಪ್ಪಸ್ವಾಮಿಗಳ ಮಠ ವೈಶಿಷ್ಟೃದಿಂದ ಕೂಡಿದೆ. ಷ.ಬ್ರ. ಹುಚ್ಚೇಶ್ವರ ಶಿವಾಚಾರ್ಯರು ತಪ್ಪಸ್ಸಿನ ಫಲದಿಂದ ನಂದಿರೂಪದ ಬಸವಣ್ಣನವರಿಗೆ ಮಠದ ಉತ್ತರಾಧಿಕಾರಿ ದೀಕ್ಷಾ ಸಂಸ್ಕಾರ ನೀಡಿದ್ದಾರೆ. ಆ ಪರಂಪರೆ ಸಾವಿರಾರು ವರ್ಷಗಳಿಂದ ಮುನ್ನಡೆದಿದೆ. ಬೇಡಿ ತಂದ ದವಸ-ಧಾನ್ಯಗಳು, ಜೋಳಿಗೆಗೆ ಹಾಕಿದ ಕಾಣಿಕೆಯಲ್ಲಿ ಭಕ್ತರನ್ನು ಸಂತೃಪ್ತಪಡಿಸುವ ಷ.ಬ್ರ.ಮೂಕಪ್ಪಸ್ವಾಮಿಗಳು ತ್ರಿವಿಧ ದಾಸೋಹಿ ಎನಿಸಿದ್ದಾರೆ ಎಂದರು.

ನಾಡಿನಾದ್ಯಂತ ಸಮಸ್ತಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಷ.ಬ್ರ.ಮೂಕಪ್ಪಸ್ವಾಮಿಗಳ ಕಾಯಕ ಮಾನವರೂಪದ ಮಠಾಧೀಶರಿಗಿಂತ ಭಿನ್ನವಾಗಿದೆ. ನಿತ್ಯವು ಭಕ್ತರ ಮನೆಮನೆಗೆ ತೆರಳುತ್ತ, ಪಾದಪೂಜೆಯೊಂದಿಗೆ ಭಕ್ತರಿಗೆ ಆಶೀರ್ವದಿಸಿ ಹರಸುತ್ತಿದ್ದಾರೆ. ಮಠದಲ್ಲಿ ಗೋಶಾಲೆ ಹಾಗೂ ನೂರಾರು ನಿರ್ಗತಿಕ ಮಕ್ಕಳಿಗೆ ಜ್ಞಾನ ದಾಸೋಹ ನಡೆಸಲಾಗುತ್ತಿದೆ. ಶ್ರೀಗಳು ರಾಜ್ಯ, ಹೊರರಾಜ್ಯಗಳಲ್ಲಿ ಭಕ್ತವೃಂದ ಹೊಂದಿದ್ದು, ಸುಕ್ಷೇತ್ರ ಗುಡ್ಡದಮಲ್ಲಾಪುರ ದಾಸೋಹ ಮಠಕ್ಕೆ ನಿತ್ಯವೂ ಭಕ್ತರು ಆಗಮಿಸುತ್ತಿದ್ದು, ಧರ್ಮಕ್ಷೇತ್ರವಾಗಿದೆ ಎಂದರು.

ಶ್ರಾವಣ ಮಾಸ ಉತ್ಸವ ಸಮಿತಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ, ಜೋಳಿಗೆಯಿಂದ ಲಕ್ಷಗಟ್ಟಲೇ ಭಕ್ತರಿಗೆ ತ್ರಿವಿಧ ದಾಸೋಹದ ನೆರವೇರಿಸುವ ಮೂಕಪ್ಪ ಶ್ರೀಗಳು ಕಾಯಕ ತತ್ವ ಮಹತ್ವದ ಸ್ಥಾನ ಪಡೆದಿದೆ. ಹಿಂದು ಧರ್ಮೀಯರಿಗೆ ಶ್ರಾವಣ ಮಾಸ ಪವಿತ್ರವಾಗಿದ್ದು, ಶಿವಶರಣರ, ಧಾರ್ಮಿಕ ಕ್ಷೇತ್ರಗಳ ದರ್ಶನದಿಂದ ಹೆಚ್ಚು ಫಲ ಸಿಗಲಿದೆ. ಜೋಡಿನಂದೀಶ್ವರರ ದರ್ಶನದಿಂದ ಪುಣ್ಯಫಲಗಳು ಲಭಿಸಲಿವೆ ಎಂದರು.

ಇದಕ್ಕೂ ಮುನ್ನ ಮೂಕಪ್ಪ ಶ್ರೀಗಳನ್ನು ವಿವಿಧ ಭಕ್ತರು ಮನೆಮನೆಗೂ ಭಿನ್ನವಿಸಿ ಪಾದಪೂಜೆ ನೆರವೇರಿಸಿದರು. ಬಳಿಕ ಪಟ್ಟಣದ ವಿವಿಧ ಬೀದಿಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಿಳೆಯರು ಆರತಿಯೊಂದಿಗೆ ಮೆರವಣಿಗೆ ನಡೆಸಿದರು.

ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಚಂದ್ರಪ್ಪ ಶೆಟ್ಟರ್, ಕವಿತಾ ಸೊಪ್ಪಿನಮಠ, ಶಿವರಾಜ ಅಂಗಡಿ, ಕುಮಾರಗೌಡ್ರ ಪಾಟೀಲ, ಪ್ರಶಾಂತ ಯಾದವಾಡ, ಬಸಣ್ಣ ಮೇಲ್ಮುರಿ, ಚನ್ನಪ್ಪ ಚನ್ನರಾಯಪಟ್ಟಣ, ಶಶಿಧರ ಗೊಲ್ಲರಹಳ್ಳಿಮಠ, ಮಹಾಲಿಂಗಪ್ಪ ಶಿರೂರು, ಮಂಗಳಾ ಸಾತೇನಹಳ್ಳಿ, ದಾಕ್ಷಾಯಿಣಿ ಹರಮಗಟ್ಟಿ, ಮಹೇಶ್ವರ ಪಸಾರದ, ಗೀತಕ್ಕ ಕಬ್ಬೂರು, ರಾಜಶ್ರೀ ಶೆಟ್ಟರ್, ಸವಿತಾ ಶೆಟ್ಟರ್, ಶಿವಣ್ಣ ಶೆಟ್ಟರ, ದಾನಪ್ಪ ಮಾಸೂರು, ಸದಾರಾಧ್ಯ ಮಠದ, ಸಿದ್ದಲಿಂಗಪ್ಪ ಕೆಂಬಿ, ಮೋಹನ ಕತ್ತಿ, ದುರ್ಗೇಶ ಗೋಣೆಮ್ಮನವರ, ಈರಣ್ಣ ಅಕ್ಕಿ, ರಾಜೇಶ್ವರಿ ಎಚ್.ಸಿ., ಪತ್ರಕರ್ತ ಕರಿಬಸಯ್ಯ ಹಿರೇಮಠ, ಕುಮಾರ ಕರ್ಚಡ ಇತರರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net