’ಮೂಗಜ್ಜನ ಕೋಳಿ’ ೧೩ ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆ

12mdk03
Published on

ಮಡಿಕೇರಿ:

ಅರೆಭಾಷೆಯ ಮೊದಲ ಸಿನಿಮಾ ಹೆಗ್ಗಳಿಕೆಯ ’ಮೂಗಜ್ಜನ ಕೋಳಿ’ ಚಲನಚಿತ್ರ ೧೩ ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಸಂತೋಷ್ ಮಾಡ ನಿರ್ದೇಶನದ ಬಹು ನಿರೀಕ್ಷಿತ ಈ ಸಿನಿಮಾ ಅರೆಭಾಷೆಯಲ್ಲಿ ಮತ್ತಷ್ಟು ಚಿತ್ರಗಳು ಬರಲು ಸ್ಫೂರ್ತಿ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ತಿಂಗಳ ೨೯ರಿಂದ ಚಿತ್ರೋತ್ಸವ ಆರಂಭವಾಗಲಿದೆ.

ಕನ್ನಡದ ಉಪಭಾಷೆಗಳಲ್ಲಿ ಒಂದಾಗಿರುವ ಅರೆಭಾಷೆಯು ಕೊಡಗು, ದಕ್ಷಿಣ ಕನ್ನಡದ ಸುಳ್ಯ, ಪುತ್ತೂರು ತಾಲೂಕು, ಕೇರಳದ ಕಾಸರಗೋಡು ಭಾಗದಲ್ಲಿ ವಾಸವಿರುವ ಗೌಡ ಸಮುದಾಯದವರ ಮಾತೃ ಭಾಷೆಯಾಗಿದೆ. ವಿಭಿನ್ನ ಆಚಾರ, ವಿಚಾರ, ಸಂಸ್ಕೃತಿ, ಹಬ್ಬ, ಹರಿದಿನ, ಭಾಷೆ ಹೊಂದಿರುವ ಈ ಸಮುದಾಯಕ್ಕಾಗಿಯೇ ಸರ್ಕಾರದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯೂ ಇದೆ. ಅರೆಭಾಷೆಯಲ್ಲಿ ಆಲ್ಬಂ ಸಾಂಗ್, ಕಿರುಚಿತ್ರ, ನಾಟಕ, ಯಕ್ಷಗಾನ, ತಾಳಮದ್ದಲೆ ಪ್ರಯೋಗಗಳು ನಡೆದು ಜನ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಚಲನಚಿತ್ರವೊಂದು ತಯಾರಾಗಿ ಇದೀಗ ಚಿತ್ರೋತ್ಸವಕ್ಕೂ ಆಯ್ಕೆ ಆಗಿದೆ.

ಇಲ್ಲಿಯ ತನಕ ಕನ್ನಡದ ಇತರಪ್ರಾದೇಶಿಕ ಭಾಷೆಗಳಾದ ತುಳು, ಕೊಂಕಣಿ, ಕೊಡವ, ಬ್ಯಾರಿ, ಬಂಜಾರ ಭಾಷೆಗಳಲ್ಲಿ ಸಿನಿಮಾಗಳು ತಯಾರಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ’ಜೀಟಿಗೆ’ ತುಳು ಚಿತ್ರ ನಿರ್ದೇಶಿಸಿದ್ದ ಸಂತೋಷ್ ಮಾಡ, ಇದೇ ಮೊದಲ ಬಾರಿಗೆ ಅರೆಭಾಷೆಯ ಚಿತ್ರ ’ಮೂಗಜ್ಜನ ಕೋಳಿ’ಯನ್ನು ನಿರ್ದೇಶನ ಮಾಡಿದ್ದಾರೆ. ಗಲ್ಫ್‌ನ ಮರಳುಗಾಡಿನಲ್ಲಿ ಬೆಳೆದ ಬಾಲಕಿ ’ಕನಸು’ ಮೊದಲ ಬಾರಿಗೆ ತನ್ನ ಹೆತ್ತವರ ಊರು ಸುಳ್ಯಕ್ಕೆ ಬರುತ್ತಾಳೆ. ಈಕೆಗೆ ಅಲ್ಲಿನ ಸುಂದರ ಹಸಿರು ಪರಿಸರ ಹೊಸದಾಗಿರುತ್ತದೆ. ತನ್ನದೇ ದೃಷ್ಟಿಕೋನದಲ್ಲಿ ಇವೆಲ್ಲವನ್ನೂ ಗಮನಿಸುವ ಬಾಲಕಿ ಮುಗ್ಧಳಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಈಕೆಯ ನೆರೆಮನೆಯಲ್ಲಿ ಕೋಳಿ ಸಾಕಿಕೊಂಡಿರುವ ಒರಟು ಸ್ವಭಾವದ ಮೂಗಜ್ಜ ಇರುತ್ತಾನೆ. ಮುಗ್ಧ ಹುಡುಗಿ ಮತ್ತು ಮೂಗಜ್ಜನ ನಡುವೆ ನಡೆಯುವ ಸಂಘರ್ಷ ಮತ್ತು ಸಂಬಂಧದ ಕತೆಯನ್ನು ’ಮೂಗಜ್ಜನ ಕೋಳಿ’ ಸಿನಿಮಾದಲ್ಲಿ ಚಿತ್ರಿಸಲಾಗಿದೆ.

ಮೂಗಜ್ಜನ ಪಾತ್ರದಲ್ಲಿ ನವೀನ್ ಡಿ. ಪಡೀಲ್ ಮತ್ತು ’ಕನಸು’ ಪಾತ್ರದಲ್ಲಿ ಗೌರಿಕ ದೀಪುಲಾಲ್ ಅಭಿನಯಿಸಿದ್ದಾರೆ. ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಸುಕನ್ಯಾ, ರಾಘವೇಂದ್ರ ಭಟ್, ಡಾ. ಜೀವನ್ ರಾಮ್ ಸುಳ್ಯ, ಸಾನಿಧ್ಯ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಡಾ. ಜೀವನ್ ರಾಮ್ ಸುಳ್ಯ ನಿರ್ದೇಶನದ ’ಅಮರಸುಳ್ಯ ಸ್ವಾತಂತ್ರ್ಯ ಹೋರಾಟ ೧೮೩೭’ ನಾಟಕದ ತುಣುಕುಗಳು ಕೂಡ ಈ ಸಿನಿಮಾದಲ್ಲಿದೆ.

ಇದೊಂದು ಮಕ್ಕಳ ಚಿತ್ರವಾಗಿದ್ದು, ಕೆ. ಸುರೇಶ್ ಹಣ ಹಾಕಿದ್ದಾರೆ. ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಸಾಹಿತ್ಯವಿದ್ದು, ಅರುಣ್ ಗೋಪಾನ್ ಸಂಗೀತ ಕೊಟ್ಟಿದ್ದಾರೆ. ಆಶಾ ಭಟ್ ಹಾಡುಗಳನ್ನು ಹಾಡಿದ್ದಾರೆ. ಸುರೇಶ್ ಅರಸ್ ಸಂಕಲನವಿದೆ. ವಿಷ್ಣುಪ್ರಸಾದ್ ಕ್ಯಾಮೆರಾ ಹಿಡಿದಿರುವ ಈ ಸಿನಿಮಾ ಈಗ ಯುಕೆ ಮೂಲದ ೧೩ ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ತಿಂಗಳ ೨೯ರಿಂದ ಚಲನಚಿತ್ರೋತ್ಸವ ಆರಂಭವಾಗುತ್ತಿದ್ದು, ಸ್ಪರ್ಧೆಗೆ ಬಂದಿರುವ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ. ಚಲನಚಿತ್ರ ನಿರ್ಮಾಪಕರ ಅಧಿವೇಶನದ ವಿದೇಶಿ ಭಾಷೆಯ ಚಲನಚಿತ್ರಗಳ ವಿಭಾಗದಲ್ಲಿ ಸ್ಪರ್ಧೆಗೆ ಚಿತ್ರ ಆಯ್ಕೆಯಾಗಿದೆ.

ಚಲನಚಿತ್ರಗಳ ವಿಭಾಗದಲ್ಲಿ ಪ್ರಾದೇಶಿಕ ಭಾಷೆಗಳ ಪಟ್ಟಿಗೆ ಅರೆಭಾಷೆಯನ್ನು ಸೇರಿಸಿ ರಾಜ್ಯ ಸರ್ಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಆದೇಶ ಹೊರಡಿಸಿದೆ. ಇದಕ್ಕೂ ಮೊದಲು ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆಗೆ ಕನ್ನಡ ಮಾತ್ರವಲ್ಲದೆ ತುಳು, ಕೊಡವ, ಕೊಂಕಣಿ, ಬಂಜಾರ ಹಾಗೂ ಬ್ಯಾರಿ ಭಾಷೆಗಳ ಚಿತ್ರಗಳನ್ನು ಪರಿಗಣಿಸಲಾಗುತ್ತಿತ್ತು. ಸರ್ಕಾರದ ನವೆಂಬರ್ ಆದೇಶದ ನಂತರ ಅರೆಭಾಷೆ ಚಿತ್ರಗಳನ್ನೂ ಚಲನಚಿತ್ರ ಪ್ರಶಸ್ತಿಗಳಿಗೆ ಪರಿಗಣಿಸುವ ಅವಕಾಶ ಸಿಕ್ಕಿದೆ. ಸರ್ಕಾರದ ಸಬ್ಸಿಡಿ ಪಡೆಯಲು ಕೂಡ ಇದರಿಂದ ಅನುಕೂಲ ಆಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಅರೆಭಾಷೆಯಲ್ಲಿ ಮತ್ತಷ್ಟು ಸಿನಿಮಾಗಳು ತಯಾರಾಗುವ ಮೂಲಕ ಕಲಾರಂಗಕ್ಕೆ ದೊಡ್ಡ ಕೊಡುಗೆಯ ನಿರೀಕ್ಷೆ ಹೊಂದಲಾಗಿದೆ.

ಏನಾದರೂ ವಿಶೇಷವಾಗಿರುವುದನ್ನು ಮಾಡುವ ಎನ್ನುವ ಕಾರಣಕ್ಕೆ ಅರೆಭಾಷೆಯಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದೇನೆ. ನಿರ್ಮಾಪಕ ಕೆ. ಸುರೇಶ್ ಈ ಸಿನಿಮಾ ನಿರ್ಮಾಣವಾಗಲು ಪ್ರಮುಖ ಕಾರಣರಾಗಿದ್ದಾರೆ. ಚಿಕ್ಕ ಸಿನಿಮಾಕ್ಕೆ ಬಂಡವಾಳ ಹಾಕಿದ್ದಕ್ಕೆ ಅವರಿಗೆ ಋಣಿ. ಈ ಸಿನಿಮಾ ೧೩ ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿರುವುದು ಖುಷಿ ತಂದಿದೆ. ಮತ್ತಷ್ಟು ಸಿನಿಮಾಗಳನ್ನು ಮಾಡಲು ಪ್ರೇರೇಪಣೆ ನೀಡಿದೆ.
ಸಂತೋಷ್ ಮಾಡ, ’ಮೂಗಜ್ಜನ ಕೋಳಿ’ ನಿರ್ದೇಶಕ

ಮೂಗಜ್ಜನ ಕೋಳಿ’ ೧೩ ನೇ ಲಿಫ್ಟ್-ಆಫ್ ಗ್ಲೋಬಲ್ ನೆಟ್‌ವರ್ಕ್ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿರುವುದು ಅರೆಭಾಷಿಕರಿಗೆ ಒಂದು ಹೆಮ್ಮೆಯ ವಿಷಯ. ಭಾಷೆ ಪ್ರದರ್ಶನ ಕಲೆಗಳ ಮೂಲಕ ಅಭಿವ್ಯಕ್ತಿಗೊಂಡಾಗ ಹೆಚ್ಚು ಜನರಿಗೆ ತಲುಪುತ್ತದೆ. ಅರೆಭಾಷೆ ಯಕ್ಷಗಾನ, ನಾಟಕ ಇದಕ್ಕೆ ಉದಾಹರಣೆ. ಅರೆಭಾಷೆ ಸಿನಿಮಾಕ್ಕೂ ಉತ್ತಮ ಭವಿಷ್ಯವಿದೆ. ನಮ್ಮ ಅವಧಿಯಲ್ಲಿ ಚಲನಚಿತ್ರಗಳ ವಿಭಾಗದಲ್ಲಿ ಪ್ರಾದೇಶಿಕ ಭಾಷೆಗಳ ಪಟ್ಟಿಗೆ ಅರೆಭಾಷೆಯನ್ನು ಸರ್ಕಾರ ಸೇರಿಸಿರುವುದು ಅರೆಭಾಷೆಯಲ್ಲಿ ಚಲನಚಿತ್ರ ನಿರ್ಮಿಸುವವರಿಗೆ ಮತ್ತಷ್ಟು ಅನುಕೂಲ ಒದಗಿಸಿದೆ.
ಲಕ್ಷ್ಮೀನಾರಾಯಣ ಕಜೆಗದ್ದೆ, ನಿಕಪೂರ್ವ ಅಧ್ಯಕ್ಷ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net