

ಮೂಡುಬಿದಿರೆ: ಉತ್ತರ ಕನ್ನಡ ಮತ್ತು ದ.ಕ. ಜಿಲ್ಲೆಯ ಮೂಡುಬಿದಿರೆಯಿಂದ ಬೈಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಅಂತರ್‌ಜಿಲ್ಲಾ ಚೋರರನ್ನು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ.ನೇತೃತ್ವದ ತಂಡ ಶುಕ್ರವಾರ ಬಂಧಿಸಿದೆ.
ತುಮಕೂರು ಜಿಲ್ಲೆ ಕೊಡವತಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ನಿವಾಸಿ ಆಕಾಶ್ ಕಲ್ಕಿ ಹಾಗೂ ಬೀರ್ಗನಹಳ್ಳಿಯ ವೀರೇಂದ್ರ ಆರೋಪಿಗಳು.
ಶುಕ್ರವಾರ ಬೆಳಗ್ಗಿನ ಜಾವ ಮೂಡುಬಿದಿರೆ ಠಾಣಾ ವ್ಯಾಪ್ತಿಯ ಪ್ರಾಂತ್ಯ ಗ್ರಾಮದ ಕೊಡಂಗಲ್ಲು ಮಹಾವೀರ ಕಾಲೇಜಿನ ಎದುರು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಆರೋಪಿಗಳಿದ್ದ ದ್ವಿಚಕ್ರ ವಾಹನಕ್ಕೆ ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಆರೋಪಿಗಳು ವಾಹನ ನಿಲ್ಲಿಸದೆ ಹಿಂತಿರುಗಿ ಹೋಗಲು ಪ್ರಯತ್ನಿಸಿದ್ದು, ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಹಾಗೂ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಅ.10ರಂದು ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರ ಠಾಣಾ ವ್ಯಾಪ್ತಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಜೈನ್ ಪಿಯು ಕಾಲೇಜು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಆರೋಪಿಗಳು ಕದ್ದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಆರೋಪಿಗಳಿಂದ ಬೈಕ್ ಸಹಿತ ಒಟ್ಟು 1.80 ಲಕ್ಷ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.