

ಮೂಡುಬಿದಿರೆ: ಮೂಡುಬಿದಿರೆ ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಬಿಜೆಪಿಯ ಜಯಶ್ರೀ ಕೇಶವ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ ಪೂಜಾರಿ ಆಯ್ಕೆಯಾಗಿದ್ದಾರೆ.
ಬುಧವಾರ ಪುರಸಭಾ ಕಚೇರಿಯಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯಿತು. ಪುರಸಭೆಯ 23 ಸ್ಥಾನಗಳ ಪೈಕಿ ಬಿಜೆಪಿ 12 ಕಾಂಗ್ರೆಸ್ 11 ಸ್ಥಾನಗಳನ್ನು ಹೊಂದಿದೆ.
ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ‘ಎ’ ಮಹಿಳೆ ಮೀಸಲಾತಿಯಡಿ ಬಿಜೆಪಿಯಿಂದ ಜಯಶ್ರೀ ಕೇಶವ್ ಹಾಗೂ ಕಾಂಗ್ರೆಸ್ನಿಂದ ಮಮತಾ ಆನಂದ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ‘ಸಾಮಾನ್ಯ ವರ್ಗ’ ಮೀಸಲಾತಿಯಡಿ ಬಿಜೆಪಿಯಿಂದ ನಾಗರಾಜ ಪೂಜಾರಿ ಹಾಗೂ ಕಾಂಗ್ರೆಸ್ನಿಂದ ಕೊರಗಪ್ಪ ನಾಮಪತ್ರ ಸಲ್ಲಿಸಿದರು.
ಬಳಿಕ ನಡೆದ ಚುನಾವಣೆಯಲ್ಲಿ ಜಯಶ್ರೀ ಕೇಶವ್ ಹಾಗೂ ನಾಗರಾಜ ಪೂಜಾರಿ ತಲಾ 14 ಮತಗಳನ್ನು ಪಡೆದು ಜಯಗಳಿಸಿದರೆ ಕಾಂಗ್ರೆಸ್ನ ಮಮತಾ ಆನಂದ ಹಾಗೂ ಕೊರಗಪ್ಪ 11 ಮತಗಳನ್ನಷ್ಟೇ ಪಡೆದರು. ಬಿಜೆಪಿ ಅಭ್ಯರ್ಥಿಗಳ ಪರ ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್ ಮತ ಚಲಾಯಿಸಿದರು.
ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಮುಖ್ಯಾಧಿಕಾರಿ ಇಂದು ಎಂ. ಉಪಸ್ಥಿತರಿದ್ದರು.