

ಮೂಡುಬಿದಿರೆ: ಪೇಟೆಯಲ್ಲಿ ಅಪರಿಚಿತ ಮಹಿಳೆಯರು ಸಣ್ಣ ಮಕ್ಕಳನ್ನು ಹಿಡಿದುಕೊಂಡು ಪೆನ್ನು ಮಾರಾಟ ಮಾಡುವ ನೆಪದಲ್ಲಿ ಭಿಕ್ಷಾಟನೆ ನಡೆಸುತ್ತಿದ್ದಾರೆ. ಈ ಮಗು ನಿದ್ರೆ ಮಾಡುವ ಸ್ಥಿತಿಯಲ್ಲಿರುತ್ತವೆ. ಕದ್ದು ತಂದು ಮಕ್ಕಳನ್ನು ಈ ರೀತಿಯಲ್ಲಿ ಬಳಸುತ್ತಿದ್ದಾರೆ ಎನ್ನುವ ಗುಮಾನಿ ಸಾರ್ವಜನಿಕರಲ್ಲಿದೆ ಎಂದು ಪುರಸಭೆ ಸದಸ್ಯರು ಸೋಮವಾರ ಪೊಲೀಸ್, ಮೆಸ್ಕಾಂ ವಿಶೇಷ ಸಭೆಯಲ್ಲಿ ಗಮನ ಸೆಳೆದರು.
ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಿಕ್ಷಾಟನೆ, ಪಾರ್ಕಿಂಗ್, ವಿದ್ಯುತ್ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು.
ಮಕ್ಕಳನ್ನು ಹಿಡಿದುಕೊಂಡು ಭಿಕ್ಷಾಟನೆ ನಡೆಸುವವರನ್ನು ಪೊಲೀಸ್ ಇಲಾಖೆ ಕೂಲಂಕುಷವಾಗಿ ಪರಿಶೀಲಿಸಿ, ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪೇಟೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಿದೆ. ಏಕಮುಖ ರಸ್ತೆಯಲ್ಲಿ ಬೇಕಾಬಿಟ್ಟಿ ವಾಹನಗಳು ಸಂಚರಿಸುತ್ತಿವೆ. ಮಸೀದಿ ರಸ್ತೆ, ಇರುವೈಲ್ ರಸ್ತೆ, ನಾಗರಕಟ್ಟೆ ರಸ್ತೆ, ಆಳ್ವಾಸ್ ರಸ್ತೆ ಹಾಗೂ ಖಾಸಗಿ ಬಸ್ ನಿಲ್ದಾಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ಇಟ್ಟು ಹೋಗುವುದರಿಂದ ಇತರ ವಾಹನಗಳ ಸಂಚಾರ ಮತ್ತು ಪಾದಾಚಾರಿಗಳ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂಬ ದೂರು ವ್ಯಕ್ತವಾಯಿತು.
ಟ್ರಾಫಿಕ್ ಸಮಸ್ಯೆಯನ್ನು ಆಲಿಸಿದ ಪೊಲೀಸ್ ಉಪನಿರೀಕ್ಷಕ ದಿವಾಕರ ರೈ, ಮೂಡುಬಿದಿರೆಯಲ್ಲಿ ಪಾರ್ಕಿಂಗ್‌ಗೆ ಸೂಕ್ತ ಜಾಗವಿಲ್ಲ. ಇಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಮೂಡುಬಿದಿರೆ ಠಾಣೆಯಲ್ಲಿ ಸಿಬಂದಿ ಕೊರತೆಯೂ ಇದೆ. ಅಲ್ಲದೆ ಪೊಲೀಸ್ ಅಧಿಕಾರಿಗಳನ್ನು ಜಿಲ್ಲೆಯ ಬೇರೆ ಬೇರೆ ಕಡೆಗೆ ಕರ್ತವ್ಯಕ್ಕೆ ಹಾಕುತ್ತಿರುವುದರಿಂದ ಇಲ್ಲಿ ಸ್ವಲ್ಪ ಏರುಪೇರಾಗುತ್ತಿದೆ. ಇರುವ ಸಿಬಂದಿಯನ್ನೇ ಬಳಸಿ ತೊಂದರೆಯಾಗದಂತೆ ಕರ್ತವ್ಯವನ್ನು ಮಾಡಿಸುತ್ತಿದ್ದೇವೆ. ಗಾಂಜಾ ವ್ಯಸನಿಗಳ ಬಗ್ಗೆಯೂ ನಿಗಾ ವಹಿಸುತ್ತಿದ್ದೇವೆ. ಅಲ್ಲದೆ ಗುಪ್ತಚರ ಇಲಾಖೆಯೂ ಕೆಲಸ ಮಾಡುತ್ತಿದೆ. ಇಲ್ಲಿಗೆ ಟ್ರಾಫಿಕ್ ಪೊಲೀಸ್ ಠಾಣೆ ಬಂದಲ್ಲಿ ಮೂಡುಬಿದಿರೆಯ ಟ್ರಾಫಿಕ್ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಕಲ್ಲಬೆಟ್ಟು ಶಾಲಾ ಬಳಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡನ್ನು ಕಿಡಿಗೇಡಿಗಳು ಚರಂಡಿಗೆ ಹಾಕಿದ್ದಾರೆ ಎಂದು ಉಪಾಧ್ಯಕ್ಷೆ ಸುಜಾತಾ ಶಶಿಧರ್ ಸಭೆಯ ಗಮನಕ್ಕೆ ತಂದರು.
ಮೂಡುಬಿದಿರೆ ಕಡಲಕೆರೆ ಪರಿಸರದಲ್ಲಿ ಹಾಗೂ ಸ್ವರಾಜ್ಯ ಮೈದಾನದ ಬಳಿ ಗಾಂಜಾ ವ್ಯಸನಿಗಳು ತಿರುಗಾಡುತ್ತಿದ್ದಾರೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ ಆಗ್ರಹಿಸಿದರು.
ಎಸ್‌ಸಿ, ಎಸ್‌ಟಿಯವರಿಗೆ ಸರ್ಕಾರವು ಯೋಜನೆಯೊಂದರಲ್ಲಿ 70 ಯುನಿಟ್ ವಿದ್ಯುತ್ ಫ್ರೀಯಾಗಿ ನೀಡಲು ಸೂಚಿಸಿದೆ. ಆದರೆ ಮೆಸ್ಕಾಂ ಅಧಿಕಾರಿಗಳು ಫಲಾನುಭವಿಗಳಿಗೆ ದಾಖಲೆಗಳನ್ನು ನೀಡುವಂತೆ ಸತ್ತಾಯಿಸುತ್ತಿದ್ದಾರೆ. ಇರುವ ದಾಖಲೆಗಳನ್ನು ಮಾತ್ರ ಪರಿಗಣಿಸಿ ವಿದ್ಯುತ್ ಕನೆಕ್ಷನ್ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಸದಸ್ಯ ಸುರೇಶ್ ಪ್ರಭು ಎಚ್ಚರಿಸಿದರು.
ಮೆಸ್ಕಾಂ ಶಾಖಾಧಿಕಾರಿ ಪ್ರವೀಣ್, ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಬನ ಎನ್ವಿರೋಟೆಕ್‌ನ ಆಡಳಿತ ನಿರ್ದೇಶಕ ಡಾ. ಬಾಲಾಜಿತ್ ಬಿ. ಶೆಟ್ಟಿ ಅವರು ಶೌಚಗುಂಡಿಯನ್ನು ರಾಸಾಯನಿಕರಹಿತವಾಗಿ ಬ್ಯಾಕ್ಟೀರಿಯಾ ಬಳಸಿ ಶೌಚಗುಂಡಿಗಳನ್ನು, ಟ್ಯಾಂಕ್‌ಗಳನ್ನು ಶುಚಿಗೊಳಿಸುವ ಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಸದಸ್ಯರಾದ ಸುರೇಶ್ ಪ್ರಭು, ಸುರೇಶ್ ಕೋಟ್ಯಾನ್, ಶ್ವೇತಾ ಪ್ರವೀಣ್, ಸುರೇಶ್ ಪ್ರಭು, ಸೌಮ್ಯಾ ಸಂದೀಪ್, ಪಿ.ಕೆ. ಥಾಮಸ್, ಕರೀಂ, ದಿನೇಶ್ ಪೂಜಾರಿ, ಜೊಸ್ಸಿ ಮಿನೇಜಸ್, ರಾಜೇಶ್ ನಾಯ್ಕ, ಮಮತಾ ಆನಂದ್ ಸಹಿತ ಸದಸ್ಯರು, ಮುಖ್ಯಾಧಿಕಾರಿ ಇಂದು ಎಂ. ಪರಿಸರ ಅಭಿಯಂತರೆ ಶಿಲ್ಪಾ, ಇಂಜಿನಿಯರ್ ಪದ್ಮನಾಭ ಚರ್ಚೆಯಲ್ಲಿ ಭಾಗವಹಿಸಿದರು.
ಪುರಸಭೆ ಸದಸ್ಯೆ ಕಣ್ಣೀರು: ಪುರಸಭಾ ಸದಸ್ಯೆ ಶಕುಂತಲಾ ದೇವಾಡಿಗ ಮಾತನಾಡಿ, ನಾಗರಕಟ್ಟೆ ರಸ್ತೆಯಲ್ಲಿ ವಾಹನ ಚಾಲಕರು ತಮ್ಮ ವಾಹನಗಳನ್ನು ಒಟ್ಟಾರೆಯಾಗಿ ರಸ್ತೆಯಲ್ಲಿ ನಿಲ್ಲಿಸಿ ಹೋಗುತ್ತಿರುವುದರಿಂದ ಇತರ ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ಜನರು ನನಗೆ ಸಿಕ್ಕಾಪಟ್ಟೆ ಬೈಯ್ಯುತ್ತಿದ್ದಾರೆ. ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತನಗೆ ಆರೋಗ್ಯವೂ ಸರಿ ಇಲ್ಲ ನಾನು ಊರಿನವರ ಬೈಗುಳ ಕೇಳಲು ಇರುವುದೇ ಎಂದು ಕಣ್ಣೀರಿಟ್ಟರು.
ಪೊಲೀಸ್ ಕ್ಷಿಪ್ರ ಕಾರ್ಯಾಚರಣೆ: ಪೇಟೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಪೆನ್ನು ಮಾರಾಟ ಮಾಡುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿ ದಿವಾಕರ ರೈ ಅವರು ತಕ್ಷಣ ಕಾರ್ಯಪ್ರವೃತರಾಗಿ ಮಹಿಳೆಯರು ಮತ್ತು ಮಕ್ಕಳನ್ನು ಹುಡುಕಿ ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.