ಒಂಟಿ ಮಹಿಳೆ ಮನೆಗೆ ನುಗ್ಗಿ ಚಿನ್ನಾಭರಣ ಸುಲಿಗೆ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

mng--15 Sep ccb arrest
Published on

ಮಂಗಳೂರು ಮೂಡುಬಿದಿರೆಯ ಅಶ್ವತ್ಥಪುರ ಬಳಿ ಮನೆಗೆ ನುಗ್ಗಿ ಒಂಟಿ ಮಹಿಳೆಗೆ ಹಲ್ಲೆ ನಡೆಸಿ ಚಿನ್ನಾಭರಣ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಅಪರಾಧ ಪತ್ತೆದಳ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.


ಆರೋಪಿ ಅಶ್ವತ್ಥಪುರ ಬೇರಿಂಜೆಗುಡ್ಡೆ ನಿವಾಸಿ ದಿನೇಶ್ ಪೂಜಾರಿ (36), ಬೆಳ್ತಂಗಡಿಯ ಮರೋಡಿ ಉಳಗುಡ್ಡೆ ಹೊಸಮನೆ ಸುಕೇಶ್ ಪೂಜಾರಿ (32) ಹಾಗೂ ಮೂಡುಬಿದಿರೆ ಮೂಡುಮಾರ್ನಾಡಿನ ಹರೀಶ್ ಪೂಜಾರಿ (34) ಬಂಧಿತರು. ಬಂಧಿತರಿಂದ ಸುಲಿಗೆ ಮಾಡಿದ ಸುಮಾರು 62 ಗ್ರಾಂ ಚಿನ್ನಾಭರಣ, 2 ಸ್ಕೂಟರ್, 3 ಮೊಬೈಲ್ ಫೋನ್, 1 ತಲವಾರು, 2 ಮಂಕಿ ಕ್ಯಾಪ್ ಸೇರಿ ಒಟ್ಟು 4.5 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ.


ಆ.30ರಂದು ರಾತ್ರಿ ಅಶ್ವತ್ಥಪುರದ ಬೇರಿಂಜೆ ಗುಡ್ಡ ಎಂಬಲ್ಲಿ ವಾಸವಿದ್ದ ಒಬ್ಬಂಟಿ ಮಹಿಳೆ ಕಮಲ ಅವರ ಮನೆಗೆ ನುಗ್ಗಿದ ಆರೋಪಿಗಳು ಮಂಕಿ ಕ್ಯಾಪ್ ಧರಿಸಿ, ಕೈಗೆ ಗ್ಲೌಸ್ ಹಾಕಿ ತಲವಾರು ಹಿಡಿದು ಬೆದರಿಸಿ, ಹಲ್ಲೆ ನಡೆಸಿ ಚಿನ್ನದ ಕರಿಮಣಿ ಸರ, 2 ಚಿನ್ನದ ಬಳೆ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದು ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಸಿಸಿಬಿ ಘಟಕದ ವಿಶೇಷ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.


ಒಂಟಿ ಮಹಿಳೆ ಕಮಲಾಗೆ ಯಾರೂ ಸಂಬಂಧಿಕರು ಸಮೀಪದಲ್ಲಿ ಇಲ್ಲದಿರುವುದನ್ನು ಗಮನಿಸಿ ಆರೋಪಿಗಳು ಸುಲಿಗೆ ಕೃತ್ಯ ನಡೆಸಿದ್ದರು. ಸುಲಿಗೆ ಮಾಡಿದರೆ ಯಾರೂ ದೂರು ನೀಡಲು ಬರುವುದಿಲ್ಲ ಎಂದು ಭಾವಿಸಿದ್ದರು. ಅಲ್ಲದೆ ಆಕೆಗೆ ಹಲ್ಲೆ ನಡೆಸಿದ ಬಳಿಕ ಆರೋಪಿಯೊಬ್ಬ ಸಹಾಯ ಮಾಡುವಂತೆ ನಟಿಸಿ ಈ ಕೃತ್ಯ ಎಸಗಿದ್ದರು. ಆರೋಪಿಗಳಾದ ದಿನೇಶ್, ಸುಕೇಶ್ ಮತ್ತು ಹರೀಶ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಅಡಕೆ ಕಳವು ಕೇಸ್ ದಾಖಲಾಗಿತ್ತು. ಸುಕೇಶ್ ವಿರುದ್ಧ ಅದೇ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಮಣಿಪಾಲ ಠಾಣೆಯಲ್ಲಿ ಕೊಲೆ ಯತ್ನ ಕೇಸು ಕೂಡ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net