

ಮಂಗಳೂರು: ಸಶಸ್ತ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಎಆರ್/ಡಿಎಆರ್) ಖಾಲಿ ಇರುವ (ಪುರುಷ, ತೃತೀಯ ಲಿಂಗ ಪುರುಷ)-3064 ಹುದ್ದೆಗಳಿಗೆ ಲಿಖಿತ ಪರೀಕ್ಷೆ ಜ.28 ರಂದು ಬೆಳಗ್ಗೆ 11 ರಿಂದ 12.30 ಗಂಟೆಯ ವರೆಗೆ ನಡೆಸಲಾಗುತ್ತಿದ್ದು, ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮೂಡುಬಿದಿರೆಯಲ್ಲಿ 8 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗೆ ಸುಮಾರು 17000 ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ.
ಅಭ್ಯರ್ಥಿಗಳಿಗೆ ಸೂಚನೆ:
ಅಭ್ಯರ್ಥಿಗಳು ಪರೀಕ್ಷೆ ಪ್ರಾರಂಭವಾಗುವ ಕನಿಷ್ಟ 120 ನಿಮಿಷಗಳ ಮುಂಚೆ ಬೆಳಗ್ಗ 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್‌ಗಳು, ಬ್ಲೂಟೂತ್ ಉಪಕರಣಗಳು, ಪೇಪರ್ ತುಂಡು, ಪುಸ್ತಕಗಳು, ನೋಟ್ಸ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವಂತಿಲ್ಲ.
ಅಭ್ಯರ್ಥಿಗಳನ್ನು ಅವರವರ ಪ್ರವೇಶ ಪತ್ರದೊಂದಿಗೆ ಯಾವುದಾದರೂ ಗುರುತಿನ ಚೀಟಿ ಉದಾ: ಚಾಲನಾ ಅನುಜ್ಞಾ ಪತ್ರ, ಪಾಸ್ಪೋಟ್/ಆಧಾರ್ ಕಾರ್ಡ್/ಪಾನ್ ಕಾರ್ಡ್/ಓಟರ್ ಐಡಿ ಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರದ ಒಳಗೆ ಬಿಡಲಾಗುವುದು.
ವಸ್ತ್ರ ಸಂಹಿತೆ ಪಾಲನೆ ಕಡ್ಡಾಯ
ಪುರುಷ ಮತ್ತು ತೃತಿಯ ಲಿಂಗ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಶರ್ಟ್‌ಗಳನ್ನು ಕಡ್ಡಾಯವಾಗಿ ಧರಿಸುವುದು ಹಾಗೂ ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್‌ಳನ್ನು ಧರಿಸುವುದು, ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸಬಾರದು.
ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸುವಂತಿಲ್ಲ. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇದಿಸಲಾಗಿದ್ದು, ಅಭ್ಯರ್ಥಿಗಳು ತೆಳುವಾದ ಅಡಿಭಾಗವಿರುವ ಪಾದರಕ್ಷೆಗಳನ್ನು ಧರಿಸಬೇಕು.
ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು ಅಥವಾ ಉಂಗುರ ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಿದೆ. ಇಂತಹ ಬೆಲೆಬಾಳುವ ವಸ್ತುಗಳ ಭದ್ರತೆ ವ್ಯವಸ್ಥೆಯು ಪರೀಕ್ಷಾ ಕೇಂದ್ರದಲ್ಲಿ ಇರುವುದಿಲ್ಲ. ಆದುದರಿಂದ ಅಭ್ಯರ್ಥಿಗಳಿಗೆ ಇಂತಹ ಬೆಲಬಾಳುವ ವಸ್ತುಗಳನ್ನು ತಮ್ಮ ಮನೆಯಲ್ಲಿಯೇ ಬಿಟ್ಟುಬರಲು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.