

ಮೂಡುಬಿದಿರೆ: ತಾಲೂಕು ಕೇಂದ್ರವಾದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೂರ್ಣಕಾಲಿಕ ಸರ್ಕಾರಿ ವೈದ್ಯರಿಲ್ಲ. ಈ ಬಗ್ಗೆ ನಿರ್ಣಯ ಕೈಗೊಂಡು ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದು ಪೂರ್ಣಕಾಲಿಕ ವೈದ್ಯರ ನೇಮಕಾತಿಗೆ ಆಗ್ರಹಿಸಬೇಕೆಂದು ಪುರಸಭಾ ಸದಸ್ಯರು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೊರಗಪ್ಪ ವಿಷಯ ಪ್ರಸ್ತಾಪಿಸಿದಾಗ ಇತರ ಸದಸ್ಯರು ಧ್ವನಿಗೂಡಿಸಿದರು.
ಒಂದು ಪೋಸ್ಟ್‌ಮಾರ್ಟಮ್ ಮಾಡಬೇಕಾದರೂ ಪಕ್ಕದ ಆಸ್ಪತ್ರೆಗಳ ವೈದ್ಯರನ್ನು ಕಾಯಬೇಕು. ಬೆಳಗ್ಗೆ ಶವವನ್ನು ಶವಾಗಾರದಲ್ಲಿಟ್ಟು, ರಾತ್ರಿವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪುರಂದರ ದೇವಾಡಿಗ ಹೇಳಿದರು. ಹಿಂದೆ ಡಾ.ಶಶಿಕಲಾ ಇರುವಾಗ ಬಡಜನರಿಗೆ ಒಳ್ಳೆಯ ಸೇವೆ ಸಿಗುತ್ತಿತ್ತು, ಆ ಬಳಿಕ ಯಾವ ಪೂರ್ಣಕಾಲಿಕ ವೈದ್ಯರೂ ಬರಲಿಲ್ಲ, ಬಂದರೂ ಉನ್ನತ ವ್ಯಾಸಂಗಕ್ಕಾಗಿ ಹೋಗಿದ್ದಾರೆ. ಹೀಗಾದರೆ ಬಡರೋಗಿಗಳು ಎಲ್ಲಿಗೆ ಹೋಗಬೇಕು ? ಎಂದು ಸುರೇಶ್ ಕೋಟ್ಯಾನ್ ಪ್ರಶ್ನಿಸಿದರು. ಸದಸ್ಯರ ಆಗ್ರಹದಂತೆ ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ನಿರ್ಣಯಿಸಲಾಯಿತು.
ಹಿಂದಿನ ಸಭೆಯಲ್ಲಿ ಚರ್ಚೆಯಾದ ಮೆಸ್ಕಾಂ ಬಳಿಯ ಮೀನು ಸ್ಟಾಲ್ ಬಗ್ಗೆ ಮತ್ತೊಮ್ಮೆ ಚರ್ಚೆಯಾಗಿ ಅವರಲ್ಲಿ ದಾಖಲೆ ಪಡೆದುಕೊಳ್ಳುವುದೆಂದು ತೀರ್ಮಾನಿಸಲಾಯಿತು.
ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ರೂಪಾ ಸಂತೋಷ್ ಶೆಟ್ಟಿ, ಸದಸ್ಯರಾದ ಪಿ.ಕೆ.ಥೋಮಸ್, ಸುರೇಶ್ ಪ್ರಭು, ಇಕ್ಬಾಲ್ ಕರೀಮ್, ಜೊಸ್ಸಿ ಮಿನೇಜಸ್, ಮಮತಾ ಆನಂದ್, ಶಕುಂತಲಾ ಹರೀಶ್, ಸೌಮ್ಯಾ ಸಂದೀಪ್, ದಿವ್ಯಾ ಜಗದೀಶ್, ಸುಜಾತಾ, ರಾಜೇಶ್ ನಾಯ್ಕ ಪಾಲ್ಗೊಂಡರು.
ಇಂದಿರಾ ಕ್ಯಾಂಟೀನ್ ಬಳಿ ಜಾಗ ಗುರುತು
ಮಾರ್ಕೆಟ್ ಬಳಿ ಇರುವ ಫಾಸ್ಟ್‌ಫುಡ್ ಸ್ಟಾಲ್‌ಗಳನ್ನು ಇನ್ನೂ ಸ್ಥಳಾಂತರಗೊಳಿಸಿಲ್ಲವೇಕೆ? ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ನಿತ್ಯ ಜಗಳವೂ ಆಗುತ್ತಿದೆ ಎಂದು ಹೇಳಿದರೂ ಆ ಸ್ಟಾಲ್‌ಗಳನ್ನು ಸ್ಥಳಾಂತರಗೊಳಿಸಿಲ್ಲವೇಕೆ ಎಂದು ಪುರಂದರ ದೇವಾಡಿಗ ಪ್ರಶ್ನಿಸಿದಾಗ ಅವರಿಗೆ ಇಂದಿರಾ ಕ್ಯಾಂಟೀನ್ ಬಳಿ ಜಾಗ ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿ ಇಂದು ಎಂ. ಹೇಳಿದರು. ಬೀದಿಬದಿ ವ್ಯಾಪಾರಸ್ಥರೆಂದು ಪುರಸಭಾ ಕೆಲ ಸಿಬ್ಬಂದಿ ಭಾಗಿಯಾಗಿ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂದು ಸದಸ್ಯೆ ಶ್ವೇತಾ ಜೈನ್ ಆರೋಪ ಮಾಡಿದಾಗ ಅಂತವರ ಬಗ್ಗೆ ಮಾಹಿತಿ ಕೊಡಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಹೇಳಿದರು.