ಅ.6-7ರಂದು ಆಳ್ವಾಸ್ ಪ್ರಗತಿ- 2023 ಬೃಹತ್ ಉದ್ಯೋಗ ಮೇಳ 192 ಕಂಪನಿಗಳು ನೋಂದಣಿ, 13,605 ಉದ್ಯೋಗಾವಕಾಶಗಳು

alvas
Published on

ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಅ. 6 ಮತ್ತು 7ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ‘ಆಳ್ವಾಸ್ ಪ್ರಗತಿ- 2023’ ಬೃಹತ್ ಉದ್ಯೋಗ ಮೇಳ ಹಮ್ಮಿಕೊಂಡಿದ್ದು, 192 ಪ್ರಮುಖ ಕಂಪನಿಗಳು ನೋಂದಾಯಿಸಿಕೊಂಡಿದ್ದು, 13,605 ಉದ್ಯೋಗಾವಕಾಶಗಳನ್ನು ಒದಗಿಸಲಿವೆ.


ಅ. 6ರಂದು ಬೆಳಗ್ಗೆ 9.30ಕ್ಕೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಯುಎಇ ಮೂಲದ ಬುರ್ಜಿಲ್ ಹೋಲ್ಡಿಂಗ್ಸ್‌ನ ಮಾನವ ಸಂಪನ್ಮೂಲದ ಸಮೂಹ ಮುಖ್ಯಸ್ಥ ಡಾ.ಸಂಜಯ್ ಕುಮಾರ್, ಅಲೆಂಬಿಕ್ ಫಾರ್ಮಾಸ್ಯೂಟಿಕಲ್ಸ್‌ನ ಮಾನವ ಸಂಪನ್ಮೂಲದ ಸಹ ಉಪಾಧ್ಯಕ್ಷ ಅರವಿಂದ ತ್ರಿಪಾಟಿ, ಫ್ಯಾಕ್ಟ್‌ಸೆಟ್ ಸಿಸ್ಟಮ್ ಇಂಡಿಯಾ ಪ್ರೈ. ಲಿ. ಉಪಾಧ್ಯಕ್ಷ ಹಾಗೂ ಭಾರತ ಮತ್ತು ಫಿಲಿಫೈನ್ಸ್ ಟಾಲೆಂಟ್ ಅಕ್ವಸಿಷನ್ ಸಹ ನಿರ್ದೇಶಕರಾದ ಅನುಪ್ಮ ರಂಜನ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಅಳ್ವ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.


ಗಲ್ಫ್‌ನ ಎಕ್ಸಪರ್ಟೈಸ್ ಮತ್ತು ಬುರ್ಜಿಲ್ ಹೋಲ್ಡಿಂಗ್ಸ್, ದುಬೈನ ಭವಾನಿ ಗ್ರೂಪ್, ಫ್ಯಾಕ್ಟ್‌ಸೆಟ್ ಸಿಸ್ಟಮ್ಸ್ ಇಂಡಿಯಾ ಪ್ರೈ. ಲಿ. ಕಂಪನಿಗಳು ವಿವಿಧ ಪ್ಯಾಕೇಜ್‌ನಡಿ ಉದ್ಯೋಗವನ್ನು ನೀಡಲಿವೆ. ಸುಮಾರು 25 ಕಂಪನಿಗಳು 250ಕ್ಕೂ ಅಧಿಕ ಉದ್ಯೋಗಗಳನ್ನು ಕೋರ್ ಮೆಕ್ಯಾನಿಕಲ್ ಪದವೀಧರರಿಗೆ ನೀಡುತ್ತಿದ್ದು, 15 ಕಂಪನಿಗಳು ಸುಮಾರು 52 ಹುದ್ದೆಗಳನ್ನು ಇಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರರಿಗೆ ನೀಡಲಿವೆ. ಹಲವು ಉತ್ಪದನಾ ವಲಯ, ಬ್ಯಾಂಕಿಂಗ್, ಆರೋಗ್ಯ, ಜುವೆಲ್ಲರಿ, ಪ್ರವಾಸೋದ್ಯಮ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪೆನಿಗಳು ಪದವಿ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ಒದಗಿಸಲಿವೆ ಎಂದು ಅವರು ವಿವರ ನೀಡಿದರು.


ವೈದ್ಯಕೀಯ, ಅರೆ ವೈದ್ಯಕೀಯ, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಮತ್ತು ಆಡಳಿತ ನಿರ್ವಹಣೆ, ಮೂಲ ವಿಜ್ಞಾನ,ನರ್ಸಿಂಗ್, ಐಟಿಐ, ಡಿಪ್ಲೊಮಾ ಹಾಗೂ ಕೌಶಲ ಹೊಂದಿದ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಹೊಂದಿದವರು ಸೇರಿದಂತೆ ಎಲ್ಲಾ ಪದವಿ ಹಾಗೂ ಸ್ನಾತಕ ಪದವೀಧರರಿಗೆ ಆಳ್ವಾಸ್ ಪ್ರಗತಿ 2023 ಅತ್ಯುತ್ತಮ ಉದ್ಯೋಗಗಳ ಬೃಹತ್ ಅವಕಾಶ ಕಲ್ಪಿಸಿದೆ.


ಹೆಚ್ಚಿನ ವಿವರಗಳಿಗಾಗಿ ಡಿಡಿಡಿ.ಚ್ಝಟ್ಟಜಠಿಜಿ.್ಚಟಞ ಗೆ ಭೇಟಿ ನೀಡಬಹುದು. ದೂರದ ಊರುಗಳಿಂದ ಬರುವ ಅಭ್ಯರ್ಥಿಗಳಿಗೆ ಅ.5ರಿಂದ ವಾಸ್ತವ್ಯದ ವ್ಯವಸ್ಥೆ ಕಲ್ಪಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂ. 9008907716, 9663190590 ಸಂಪರ್ಕಿಸಬಹುದು. ಐಟಿಐ, ಪಿಯುಸಿ ಮತ್ತು ಎಸೆಸೆಲ್ಸಿ ಹಾಗೂ ಇದಕ್ಕಿಂತ ಕೆಳ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಹೊರತುಪಡಿಸಿ ಎಲ್ಲರಿಗೂ ನೋಂದಣಿ ಕಡ್ಡಾಯವಾಗಿದೆ. ಸ್ಥಳದಲ್ಲೇ ನೋಂದಣಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ವಿವೇಕ್ ಆಳ್ವ ತಿಳಿಸಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ತರಬೇತಿ ಮತ್ತು ನಿಯೋಜನೆಯ ಮುಖ್ಯಸ್ಥ ಸುಶಾಂತ್ ಅನಿಲ್ ಲೋಬೋ, ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net