ತಾಳೆ ಬೆಳೆಯತ್ತ ಮಲೆನಾಡಿನ ರೈತರ ಚಿತ್ತ

MDG1 (4)
Published on

ಮೂಡಿಗೆರೆ: ಕೊಳೆರೋಗ, ಪಾತಾಳಕ್ಕಿಳಿದ ಅಡಕೆ ಬೆಳೆ, ಕಾರ್ಮಿಕರ ಕೊರತೆ ಮತ್ತಿತರೆ ಸಮಸ್ಯೆಗಳಿಂದ ಮಲೆನಾಡಿನ ರೈತಾಪಿ ವರ್ಗ ಲಾಭದಾಯಕ ತಾಳೆ ಕೃಷಿಯಕಡೆ ಆಕರ್ಷಿತರಾಗುತ್ತಿದ್ದಾರೆ ಎಂದು ಪತಂಜಲಿ ಫುಡ್ಸ್ ಲಿಮಿಟೆಡ್ ಕ್ಷೇತ್ರಾಧಿಕಾರಿ ಹನುಮೇಗೌಡ ಹೇಳಿದರು.

ಹ್ಯಾರಗುಡ್ಡೆ ಗ್ರಾಮದಲ್ಲಿ ಜಿಪಂ, ತೋಟಗಾರಿಕಾ ಇಲಾಖೆ, ಪತಂಜಲಿ ಫುಡ್ಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಮೇಗಾ ತಾಳೆ ಬೆಳೆ ಕೃಷಿ ಪ್ರೋತ್ಸಾಹ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ತಾಳೆ ಕೃಷಿಗೆ 4 ವರ್ಷ ತುಂಬುತ್ತಿದ್ದಂತೆ ಫಸಲು ಆರಂಭವಾಗುತ್ತದೆ. ದೇಶದಲ್ಲಿ ವರ್ಷಕ್ಕೆ 360 ದಶಲಕ್ಷ ಲೀಟರ್ ತಾಳೆಎಣ್ಣೆ ಅಗತ್ಯವಿದೆ. ಆದರೆ ಶೇ.40 ಪಾಮ್ ಅಡುಗೆ ಎಣ್ಣೆ ಸೇರಿದಂತೆ ಒಂದುವರೆ ಲಕ್ಷ ಕೋಟಿ ಲೀಟರ್ ಎಣ್ಣೆಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಬೆಳೆಗೆ ಹೆಚ್ಚಿನ ಕಾರ್ಮಿಕರ ಅವಶ್ಯಕತೆಯಿಲ್ಲ. 5 ಎಕರೆ ಪ್ರದೇಶದಲ್ಲಿರುವ ತಾಳೆ ತೋಟವನ್ನು ಓರ್ವ ಕಾರ್ಮಿಕ ನಿರ್ವಹಿಸಬಹುದು. ಯಾವುದೆ ರೋಗ ರುಜಿನಗಳ ಭಯವಿಲ್ಲ ಎಂದು ತಿಳಿಸಿದರು.

ತಾಳೆ ಬೆಳೆ ಮಾರಾಟದ ದರ ನಿಗದಿಪಡಿಸುವ ಅಧಿಕಾರವನ್ನು ರೈತರು ಹೊಂದಿದ್ದಾರೆ. ಪ್ರತಿ ತಿಂಗಳು 10 ರಂದು ಸಂಸ್ಥೆಯಿಂದ ರೈತರ ಖಾತೆಗೆ ಹಣ ಜಮವಾಗಲಿದೆ. ಕೇಂದ್ರ ಸರ್ಕಾರ ಪ್ರತಿವರ್ಷ ಬೆಂಬಲ ಬೆಲೆ ನೀಡುತ್ತದೆ. ಇದು ನಾಳೆ ಬೆಳಗಾರರಿಗೆ ವರದಾನವಾಗಲಿದೆ. ವರ್ಷ ಪೂರ್ತಿ ಇಳುವರಿ ಸಿಗುವ ಬಹು ಬೇಡಿಕೆಯ ತಾಳೆ ಕೃಷಿಯನ್ನು ಈಗ ತಾಲೂಕಿನ ರೈತರು ಬೆಳೆಸಲು ಮುಂದಾಗಿದ್ದಾರೆ. ಮಲೆನಾಡು ಭಾಗದಲ್ಲಿ ಅಡಕೆ ತೋಟಗಳು ಹಳದಿ ರೋಗಕ್ಕೆ ತುತ್ತಾಗಿ ನಾಶವಾಗುತ್ತಿದೆ. ಸುಲಭ ವಿಧಾನದ ಮೂಲಕ ಗುಡ್ಡಗಾಡು ಪ್ರದೇಶದಲ್ಲಿ ಸುಲಭವಾಗಿ ಬೆಳೆದು ಲಾಭಗಳಿಸಬಹುದಾದ ತಾಳೆ ಕೃಷಿ ರೈತರಿಗೆ ವರದಾನವಾಗಲಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net