ಮೆಕ್ಕೆಜೋಳ ಬಿತ್ತನೆಯತ್ತ ರೈತರ ಚಿತ್ತ

RAITH SAMPARKA KENDRA
Published on

ಲಕ್ಷ್ಮೇಶ್ವರ: ಮುಂಗಾರು ಮಳೆಗಳು ಸಮರ್ಪಕವಾಗಿ ಸುರಿಯದ ಕಾರಣ ಹೆಸರು, ಹತ್ತಿ, ಉಳ್ಳಾಗಡ್ಡಿ, ಶೇಂಗಾ ಬೆಳೆಗಳ ಬಿತ್ತನೆ ಕಾಲಾವಧಿ ಮುಗಿದಿದೆ.

ಕಳೆದ ಎರಡು ದಿನಗಳಿಂದ ಅಲ್ಪಸ್ವಲ್ಪ ಮಳೆ ಸುರಿಯಲಾರಂಭಿಸಿದ್ದು, ಬಹುತೇಕ ರೈತರು ಗೋವಿನಜೋಳ ಬಿತ್ತನೆಗೆ ಮುಂದಾಗಿದ್ದಾರೆ.

ತಾಲೂಕಿನ ರೈತರು ರೈತ ಸಂಪರ್ಕ ಕೇಂದ್ರದ ಮುಂದೆ ಮೆಕ್ಕೆ ಜೋಳದ ಬೀಜ ಖರೀದಿಗೆ ಮುಗಿಬಿದ್ದಿದ್ದಾರೆ. ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಸೋಮವಾರ ಸಂಜೆಯವರೆಗೂ ರೈತರು ಸರದಿ ಸಾಲಿನಲ್ಲಿ ನಿಂತು ಬೀಜ ಖರೀದಿಸುತ್ತಿರುವುದು ಕಂಡುಬಂತು.

ಈಗಾಗಲೇ ಮುಕ್ತ ಮಾರುಕಟ್ಟೆ ಹೊರತುಪಡಿಸಿ ಲಕ್ಷ್ಮೇಶ್ವರ ರೈತ ಸಂಪರ್ಕ ಕೇಂದ್ರದಲ್ಲಿ 330 ಕ್ವಿಂಟಾಲ್ ಮೆಕ್ಕೆಜೋಳದ ಬೀಜ ಮಾರಾಟವಾಗಿದೆ.

ಸರ್ವರ್ ಸಮಸ್ಯೆ

ಪ್ರಸಕ್ತ ವರ್ಷ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಕೊಡುವ ಬಿತ್ತನೆ ಬೀಜಗಳ ಪ್ರತಿ ಪ್ಯಾಕೆಟ್‌ಗಳನ್ನು ಸ್ಕ್ಯಾನ್ ಮಾಡಿ ಕೊಡಬೇಕು. ಆದರೆ, ಸರ್ವರ್ ಸಮಸ್ಯೆ, ಪದೇಪದೆ ವಿದ್ಯುತ್ ಕೈಕೊಡುತ್ತಿರುವುದು ಬೀಜ ವಿತರಣೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದೆ. ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ ಬೆಳಗ್ಗೆ 8 ಗಂಟೆಗೆ ಬಂದು ಸಂಜೆ 8ರವರೆಗೂ ಕೆಲಸ ಮಾಡುತ್ತಿದ್ದರೂ ಸರ್ವರ್, ವಿದ್ಯುತ್ ಸಮಸ್ಯೆ ಜತೆಗೆ ಹೊಸ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ. ಎರಡು ದಿನಗಳಿಂದ ರೈತರು ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಪಾಳಿ ಚೀಟಿ ಬರೆದು ಕೊಡಲಾಗುತ್ತಿದೆ.

ರೈತ ಸಂಪರ್ಕ ಕೇಂದ್ರದ ಮುಂದೆ ಹಗಲೆಲ್ಲ ಕಾದರೂ ಬಿತ್ತನೆ ಬೀಜ ಸಿಗುತ್ತಿಲ್ಲ. ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೃಷಿ ಸಚಿವರು ರೈತರ ಪರಿಸ್ಥಿತಿ ಅರಿತು ಮ್ಯಾನ್ಯುವಲ್ ಪದ್ಧತಿಯಲ್ಲಿ ಬೀಜ ಕೊಡಬೇಕು ಇಲ್ಲವೇ ಪರ್ಯಾಯ ಮತ್ತು ಹೆಚ್ಚಿನ ವ್ಯವಸ್ಥೆ ಕಲ್ಪಿಸಬೇಕು.ಚಂದ್ರು ಮಾಗಡಿ, ಮುದಕಪ್ಪ ಅದಿ ರೈತರು ಏಕಕಾಲಕ್ಕೆ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೀಜ ಖರೀದಿಗೆ ಮುಂದಾಗಿರುವುದು ಮತ್ತು ಪ್ರತಿಯೊಂದು ಪ್ಯಾಕೆಟನ್ನು ಸ್ಕ್ಯಾನ್ ಮಾಡಿ ಗಣಕೀಕರಣ ಮಾಡಬೇಕಾಗಿರುವುದರಿಂದ ಮತ್ತು ಸರ್ವರ್ ಸಮಸ್ಯೆ ಇರುವುದರಿಂದ ಬೀಜ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಪರ್ಯಾಯ ವ್ಯವಸ್ಥೆ ಕಷ್ಟ. ಆದರೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ.ರೇವಣಪ್ಪ ಮನಗೂಳಿ ಸಹಾಯಕ ಕೃಷಿ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net