ತೋಟ ನಿರ್ವಹಣೆಯತ್ತ ಕಾಫಿ ಬೆಳೆಗಾರರ ಚಿತ್ತ

ತೋಟ ನಿರ್ವಹಣೆಯತ್ತ ಕಾಫಿ ಬೆಳೆಗಾರರ ಚಿತ್ತ
Published on

ಹಿರಿಕರ ರವಿ ಸೋಮವಾರಪೇಟೆ
ಪೂರ್ವ ಮುಂಗಾರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಕೃಷಿಕರ ಮೊಗದಲ್ಲಿ ಅಂತೂ ಮಂದಹಾಸ ಮೂಡಿದೆ. ಉತ್ತಮ ಮಳೆ ಸುರಿಯುತ್ತಿದ್ದು, ಕಾಫಿ ಬೆಳೆಗಾರರು ತೋಟ ನಿರ್ವಹಣೆ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಬರದ ಭಯದಲ್ಲೇ ಕಂಗಾಲಾಗಿದ್ದ ಕಾಫಿ ಬೆಳೆಗಾರರು, ಮರ ಕಪಾತು ಹಾಗೂ ಗಿಡ ಕಪಾತು ಮಾಡಿಸಲು ಕಾರ್ಮಿಕರಿಗಾಗಿ ಪರದಾಡುತ್ತಿದ್ದಾರೆ. ಪೂರ್ವ ಮುಂಗಾರು ವಿಳಂಬವಾದ ಕಾರಣ ನಿರ್ವಹಣಾ ಕೆಲಸಗಳಿಗೆ ಹಿನ್ನಡೆಯಾಗಿತ್ತು. ಜೂನ್ 1ರಿಂದಲೇ ಮುಂಗಾರು ಪ್ರಾರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಮಾಹಿತಿ ಕೊಟ್ಟಿರುವುದರಿಂದ ಇನ್ನು 20 ದಿನಗಳ ಒಳಗೆ ಕೆಲಸ ಮುಗಿಸಬೇಕಾಗಿದೆ ಎಂದು ಬೆಳೆಗಾರರು ಹೇಳಿದರು. ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೆ 156 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 94.11 ಮಿ.ಮೀ. ಮಳೆಯಾಗಿತ್ತು.
ಒಟ್ಟು ತಾಲೂಕಿನಲ್ಲಿ 28,590 ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. 22,900 ಹೆ.ನಲ್ಲಿ ಅರೇಬಿಕಾ ಕಾಫಿ ಹಾಗೂ 5690 ಹೆ.ನಲ್ಲಿ ರೋಬಸ್ಟಾ ಕಾಫಿ ಬೆಳೆಯಲಾಗುತ್ತಿದೆ.

ತಮಿಳುನಾಡು ಕಾರ್ಮಿಕರು: ಕಾಫಿ ತೋಟಗಳಲ್ಲಿ ಅತಿ ಎತ್ತರದ ಸಿಲ್ವರ್ ಮರಗಳು ಸೇರಿದಂತೆ ಕಾಡು ಜಾತಿಯ ಮರಗಳು ಇದ್ದು, ಅನುಭವಿಗಳು ಮರ ಹತ್ತ ಬೇಕಾಗಿದೆ. ಕೊಡಗಿನಲ್ಲಿ ಮರಹತ್ತುವ ಕಾರ್ಮಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಮರದಿಂದ ಬಿದ್ದು ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸ್ಥಳೀಯರು ಮರಹತ್ತಿ ರೆಂಬೆಗಳನ್ನು ಕಡಿಯಲು ಬರುತ್ತಿಲ್ಲ. ಈ ಕಾರಣದಿಂದ ತಮಿಳುನಾಡಿನಿಂದ ಬರುವ ಕಾರ್ಮಿಕರನ್ನು ಅವಲಂಬಿಸಬೇಕಾಗಿದೆ ಎಂದು ಬೆಳೆಗಾರರು ಹೇಳಿದರು.
ಕಾರ್ಮಿಕರ ಕೊರತೆ: ಕಾಫಿ ತೋಟ ಕಾರ್ಮಿಕರ ಕೊರತೆಯ ಹಿನ್ನೆಲೆ ದುಪ್ಪಟ್ಟು ಕೂಲಿಯನ್ನು ಕೊಟ್ಟು ಕೆಲಸ ಮಾಡಿಸಬೇಕಾದ ಅನಿವಾರ್ಯತೆ ಒದಗಿದೆ. ನೆರಳು ನಿರ್ವಹಣೆಗಾಗಿ ಶೀಘ್ರ ಮರ ಕಪಾತು ಮಾಡಬೇಕಾಗಿದ್ದು, ಮರ ಹತ್ತಿ ರೆಂಬೆ ಕಡಿಯುವವರಿಗೆ 1400 ರೂ. ಕೂಲಿ ಕೊಡಬೇಕಾಗಿದೆ. ಸೌದೆ ಕಡಿಯುವರೆಗೂ 700 ರೂ. ದಿನಗೂಲಿ ನೀಡಬೇಕಾಗಿದೆ. ಉತ್ತಮ ಹೂ ಅರಳಿದರೂ, ನಿಗದಿತ ಸಮಯದಲ್ಲಿ ಕಾಫಿ ಗಿಡ ಕಪಾತು, ರಾಸಾಯನಿಕ ಗೊಬ್ಬರ ಹಾಕುವುದು, ಬಿಳಿಕಾಂಡ ಕೊರಕದ ಹತೋಟಿಗೆ ಕ್ರಮ ಕೈಗೊಳ್ಳುವುದು, ಇವೆಲ್ಲವನ್ನು ನಿಗದಿತ ಸಮಯದಲ್ಲಿ ಮಾಡಲೇಬೇಕಾಗಿದೆ. ಈಗ ತಮಿಳುನಾಡು ಕಾರ್ಮಿಕರನ್ನು ಬೆಳೆಗಾರರು ಹುಡುಕುತ್ತಿದ್ದಾರೆ.

ಗಿಡಕಪಾತು ಕಾರ್ಮಿಕರಿಗೂ ಡಿಮಾಂಡ್: ಮರಕಪಾತಿನ ನಂತರ ಕಾಫಿ ಗಿಡಕಪಾತು ನಡೆಯಬೇಕು (ಫಸಲು ನೀಡದ ರೆಕ್ಕೆಗಳನ್ನು ಕತ್ತರಿಸಿ ತೆಗೆಯುವುದು). ಈ ಸೂಕ್ಷ್ಮ ಕೆಲಸವನ್ನು ಸ್ಥಳೀಯ ಅನುಭವಿ ಕಾರ್ಮಿಕರೇ ಮಾಡಬೇಕಾಗಿದ್ದು, ಇಂತಹ ಕಾರ್ಮಿಕರ ಬೇಡಿಕೆಯೂ ಜಾಸ್ತಿಯಾಗಿ, ಹೆಚ್ಚಿನ ಕೂಲಿ ಕೇಳುತ್ತಿದ್ದಾರೆ. ಕೇಳಿದಷ್ಟು ಕೂಲಿ ಕೊಡಲು ಬೆಳೆಗಾರರು ಮುಂದಾಗಿದ್ದರೂ ಕಾರ್ಮಿಕರು ಸಿಗುತ್ತಿಲ್ಲ.
ನಿಗದಿತ ಸಮಯದಲ್ಲಿ ಪೂರ್ವ ಮುಂಗಾರು ಬೀಳದ ಹಿನ್ನೆಲೆಯಲ್ಲಿ ಇವೆಲ್ಲ ಸಮಸ್ಯೆಗಳನ್ನು ಬೆಳೆಗಾರರು ಅನುಭವಿಸಬೇಕಾಗಿದೆ. ನೆರಳು ಜಾಸ್ತಿಯಾದರೆ ಕಾಫಿ ಗಿಡಗಳು ಚಿಗುರುವುದಿಲ್ಲ. ಕಾಳುಮೆಣಸು ಫಸಲು ಸಿಗುವುದಿಲ್ಲ. ಗಿಡಕಪಾತು ಮಾಡದಿದ್ದರೆ ಮುಂದಿನ ಸಾಲಿನ ಫಸಲು ಸಿಗುವುದಿಲ್ಲ. ಕಾಫಿ ಗಿಡ ಚಿಗುರುತ್ತಿರುವುದರಿಂದ ಶಿಲೀಂಧ್ರನಾಶಕ ಸಿಂಪಡಿಸಲು ಬೆಳೆಗಾರರು ಸಿದ್ಧತೆ ಮಾಡಿಕೊಂಡಿದ್ದಾರೆ. ಚಿಕ್ಕ ಗಿಡಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಕಾಗಿದೆ. ಇವೆಲ್ಲ ಸಮಸ್ಯೆಗಳಿಂದ ಕಾಫಿ ಉತ್ಪಾದನಾ ವೆಚ್ಚ ಜಾಸ್ತಿಯಾಗಿ ಸಾಲಗಾರರಾಗಬೇಕಾಗಿದೆ ಎಂದು ಬೆಳೆಗಾರರು ಹೇಳಿದರು.
ಕಾಫಿ ಮಂಡಳಿ ಸಲಹೆ: ರಸಗೊಬ್ಬರಗಳನ್ನು ಹಾಕುವ ಮೊದಲು ಕಾಫಿ ಗಿಡಗಳ ಕೆಳಗೆ ಎಲೆಗಳ ದರಗನ್ನು ಗುಡಿಸಿ ಮತ್ತು ಕೋಲು ಅಥವಾ ಕೈಮುಳ್ಳುಗಳನ್ನು ಬಳಸಿ ಮುಖ್ಯ ಕಾಂಡದ ಸುತ್ತಲೂ ಮಣ್ಣುನ್ನು ಕೆದಕಬೇಕು. ರಸಗೊಬ್ಬರವನ್ನು ಕಾಂಡದ ಸುತ್ತ ಸುರಳಿಯಾಕಾರದಲ್ಲಿ ಹಾಕಿ ದರಗನ್ನು ಮುಚ್ಚಬೇಕು. ಈ ವಿಧಾನವೂ ತುಂಬ ಪರಿಣಾಮಕಾರಿಯಾಗಿದ್ದು, ಪೋಷಕಾಂಶಗಳನ್ನು ಎಳೆದುಕೊಳ್ಳುವ ನೂಲು ಬೇರುಗಳಿಗೆ ಸಹಾಯವಾಗುತ್ತದೆ. ಪೋಷಕಾಂಶಗಳು ಆವಿಯಾಗುವುದು ಮತ್ತು ತೊಳೆದುಹೋಗುವುದನ್ನು ತಡೆಯುತ್ತದೆ ಎಂದು ಕಾಫಿ ಮಂಡಳಿ ತಿಳಿಸಿದೆ.
ಮಳೆ ಜಾಸ್ತಿಯಾದಂತೆ ಕಾಫಿ ತೋಟದಲ್ಲಿ ಕೊಳೆರೋಗ ಹರಡುವ ಕಾರಣ ನೆರಳು ನಿರ್ವಹಣೆ ಮಾಡಬೇಕು. ತೋಟದೊಳಗೆ ಸೂರ್ಯನ ಬೆಳಕು ಬೀಳುವಂತೆ ಮಾಡಿಕೊಳ್ಳಬೇಕು. ಬಿಳಿಕಾಂಡಕೊರಕ ಕೀಟಬಾಧೆಯಿರುವ ತೋಟಗಳಲ್ಲಿ 20 ಅಡಿ ತನಕ ಮರದ ರೆಂಬೆಗಳನ್ನು ತೆಗೆಯಬೇಕು ಎಂದು ತಿಳಿಸಿದ್ದಾರೆ.
ಕಾಳುಮೆಣಸಿಗೂ ಉತ್ತಮ:ಕಪ್ಪು ಚಿನ್ನ ಎಂದೇ ಕರೆಸಿಕೊಳ್ಳುವ ಕಾಳುಮೆಣಸು ಬೆಳೆಗೆ ಬೀಳುತ್ತಿರುವ ಮಳೆ ಅವಶ್ಯಕತೆಯಿದ್ದು, ಉತ್ತಮ ಫಸಲಿನ ನಿರೀಕ್ಷೆ ಮಾಡಲಾಗಿದೆ. ತಾಲೂಕಿನಲ್ಲಿ ಅತಿ ಹೆಚ್ಚು ಕಾಳುಮೆಣಸು ಬೆಳೆಗಾರರು ಪೂರ್ವ ಮುಂಗಾರನ್ನು ನಂಬಿಕೊಂಡಿದ್ದಾರೆ..
ಸೋಮವಾರಪೇಟೆ ತಾಲೂಕಿನಲ್ಲಿ 5,500 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. ಕೃಷಿಕರು ಅತಿ ಹೆಚ್ಚು ಕಾಳಜಿ ವಹಿಸಿ ಬೆಳೆಯುವ ಬೆಳೆ ಇದಾಗಿದೆ. ಕಾಫಿ ಬೆಳೆಗಾರರ ಆಪತ್ಭಾಂದವ ಎಂದೇ ಕರೆಸಿಕೊಂಡಿರುವ ಕಾಳುಮೆಣಸಿನ ಬೆಲೆ ಪ್ರಸಕ್ತ ವರ್ಷ 600 ರೂ. ಬೆಲೆಯಿದೆ.

ಮೆಣಸು ಬಳ್ಳಿಗಳಿಗೆ ರೋಗ ತಗುಲಬಾರದೆಂದು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸುತ್ತಿದ್ದಾರೆ. ಜೂನ್ ತಿಂಗಳಲ್ಲಿ ಬಳ್ಳಿಗಳಲ್ಲಿ ಚಿಗುರು ಬಂದು ಫಸಲು ಕಟ್ಟುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ. ಒಟ್ಟಿನಲ್ಲಿ ಹಿಂಗಾರು ಮಳೆ ಕೃಷಿ ಚಟುವಟಿಕೆ ತೊಡಗಲು ಹುಮ್ಮಸ್ಸು ತರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net