

ವಿಜಯವಾಣಿ ಸುದ್ದಿಜಾಲ ಉಡುಪಿ
ಜಿಲ್ಲೆಯಲ್ಲಿರುವ ಕ್ರೈಸ್ತ ಸಮುದಾಯದವರು ಕನ್ಯಾಮರಿಯಮ್ಮ ಜನ್ಮದಿನದ ಪ್ರಯುಕ್ತ ಭಾನುವಾರ ಸಂಭ್ರಮದಿಂದ ಮೊಂತಿ ಫೆಸ್ಟ್ ಆಚರಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಭತ್ತದ ತೆನೆಗಳಿಗೆ ಧರ್ಮಗುರುಗಳು ಆಶೀರ್ವದಿಸಿದರು.
ಪುಟ್ಟ ಮಕ್ಕಳು ಕನ್ಯಾಮರಿಯಮ್ಮ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚ್ಗಳಲ್ಲಿ ಧರ್ಮಗುರುಗಳು ಭತ್ತದ ತೆನೆಗೆ ಆಶೀರ್ವದಿಸಿ, ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಅಲ್ಲದೆ, ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನ-ಮಾನದ ಕುರಿತು ಪ್ರವಚನ ನೀಡಿದರು.
ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚ್ನ ಪ್ರಧಾನ ಧರ್ಮಗುರು ವಂ.ಚಾರ್ಲ್ಸ್ ಮಿನೇಜಸ್ ಅವರು ಭತ್ತದ ತೆನೆಗೆ ಆಶೀರ್ವದಿಸಿದರು. ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಧರ್ಮಗುರು ವಂ. ಫರ್ಡಿನಾಂಡ್ ಗೊನ್ಸಾಲ್ವಿಸ್, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ. ಲೆಸ್ಲಿ ಡಿಸೋಜ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ. ಆಲ್ಬನ್ ಡಿಸೋಜ, ಸಾಸ್ತಾನ ಸಂತ ಅಂತೋನಿ ದೇವಾಲಯದಲ್ಲಿ ವಂ. ಸುನೀಲ್ ಡಿಸಿಲ್ವ ನೇತೃತ್ವದಲ್ಲಿ ಹಾಗೂ ಜಿಲ್ಲೆಯಲ್ಲಿರುವ ಎಲ್ಲ ಚರ್ಚ್ಗಳಲ್ಲಿಯೂ ಸಹ ಆಯಾ ಧರ್ಮಗುರುಗಳ ಉಪಸ್ಥಿತಿಯಲ್ಲಿ ಬಲಿಪೂಜೆ ನಡೆದವು.
ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಹೊಸ ಭತ್ತದ ತೆನೆ ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬು ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಮನೆಗೆ ತಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ದೇವರ ಪೀಠದ ಮೇಲಿಟ್ಟು ಪ್ರಾರ್ಥಿಸಿದರು. ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಮತ್ತು ಹಾಲಿನೊಂದಿಗೆ ಸೇವಿಸಿದರು.
ಹಬ್ಬಕ್ಕೆ ಮುಂಚಿತವಾಗಿ ಎಲ್ಲ ಚರ್ಚ್ಗಳಲ್ಲಿ 9 ದಿನ ಮಾತೆ ಮೇರಿಯ ಕೃಪೆ ಬೇಡಿಕೊಂಡು ವಿಶೇಷ ಪ್ರಾರ್ಥನೆ (ನವೇನಾ) ನಡೆಯುತ್ತದೆ. 9ನೇ ದಿನವನ್ನು ಕರಾವಳಿಯ ಕ್ರೈಸ್ತರು ಮೊಂತಿ ಹಬ್ಬವಾಗಿ ಆಚರಿಸುತ್ತಾರೆ. ಈ ದಿನದಂದು ಕನ್ಯಾಮರಿಯಮ್ಮ ಮೂರ್ತಿಯನ್ನು ಚರ್ಚ್ನ ಮುಂಭಾಗದಲ್ಲಿಟ್ಟು ಕ್ರೈಸ್ತ ಹಾಡುಗಳ ಮೂಲಕ ಪುಟಾಣಿ ಮಕ್ಕಳು ಪುಷ್ಪಾರ್ಪಣೆ ಮಾಡಿದ ನಂತರ ಮೊಂತಿ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ.
ಮೊಂತಿ ಫೆಸ್ಟ್ ನಲ್ಲಿ ಸಸ್ಯಾಹಾರ ಭೋಜನ ಅತ್ಯಂತ ವಿಶೇಷವಾಗಿದೆ. ಕ್ರೈಸ್ತರ ಪ್ರತಿ ಮನೆಯಲ್ಲಿ ಅಂದು ಕನಿಷ್ಠ 3, 5 ಅಥವಾ 7 ಬಗೆಯ ಸಸ್ಯಾಹಾರ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ ಹೆಚ್ಚಿನ ಆದ್ಯತೆ. ಪಾಯಸವಂತೂ ಭೋಜನದ ಅವಿಭಾಜ್ಯ ಅಂಗ. ಎಲ್ಲರೂ ತಮ್ಮ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜನ ತಯಾರಿಸಿ, ನೆಲದ ಮೇಲೆ ಕುಳಿತು, ಬಾಳೆ ಎಲೆಯಲ್ಲಿ ಅವುಗಳನ್ನು ಸೇವಿಸುವುದು ಈ ಹಬ್ಬದ ಇನ್ನೊಂದು ವೈಶಿಷ್ಟ್ಯವಾಗಿದೆ.