

ಹುಬ್ಬಳ್ಳಿ: ಇಲ್ಲಿಯ ನವನಗರದ ಶ್ರೀಚಿಕೇನಕೊಪ್ಪ ಚನ್ನವಿರಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ವಿವಿಧ ಕಲೆಗಳಲ್ಲಿ ಆಸಕ್ತಿ ಇರುವ ಮಕ್ಕಳಿಗಾಗಿ ಮಾಸಿಕ ಸಂಗೀತ ಸಂಗಮ ಕಾರ್ಯಕ್ರಮವನ್ನು ಭಾನುವಾರ ಆರಂಭಿಸಲಾಯಿತು.
ಶ್ರೀಶಿವಶಾಂತವೀರ ಶರಣರ ಅನುಗ್ರಹ ಹಾಗೂ ಆದೇಶದ ಮೇರೆಗೆ ಪ್ರಾರಂಭಿಸಿದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಹಿಂದುಸ್ಥಾನಿ ಗಾಯಕ ಡಾ. ಅಶೋಕ ಹುಗ್ಗಣ್ಣವರ, ಸಂಗೀತ ಕಲಾವಿದರು ಪ್ರಸಿದ್ಧಿ ಪ್ರಚಾರದ ಬೆನ್ನು ಹತ್ತದೇ ಇಂಪಾಗಿ ಹಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಹೇಳಿದರು. ರಾಗ ಪುರಿಯಾಧನಶ್ರೀ ಪ್ರಸ್ತುತಪಡಿಸಿ ನಂತರ ವಚನ ಹಾಗೂ ದಾಸರ ಪದಗಳಿಗೆ ಧ್ವನಿಯಾದರು.
ಶ್ರೇಯಾ ಬೆಂಗೇರಿ, ಲಕ್ಷ್ಮೀ ರಾಯಕೊಪ್ಪ ಭಕ್ತೀಗಿತೆಗಳನ್ನು ಹಾಡಿದರು. ನೂರೊಂದಯ್ಯ ಸ್ವಾಮಿ ಹಾಮೋರ್ನಿಯಂ, ವೀರೇಶ ಅಕ್ಕಿ, ಆಂಜನೇಯ ಭಜಂತ್ರಿ ತಬಲಾ ಸಾಥ್ ಸಂಗತ್ ನೀಡಿದರು.
ನಿವೃತ್ತ ಪ್ರಾಚಾರ್ಯ ಎಸ್.ಕೆ. ಜಂಗ್ಲೆಪ್ಪಗೌಡರ ಪ್ರಾಸ್ತಾವಿಕ ಮಾತನಾಡಿ, ಪ್ರತಿ ತಿಂಗಳ ಕೊನೆಯ ಭಾನುವಾರ ವಿವಿಧ ಕಲೆಗಳನ್ನು ಆರಾಧಿಸಲು ಹಾಗೂ ಪ್ರೋತ್ಸಾಹಿಸಲು ವೇದಿಕೆ ಸಿದ್ಧಪಡಿಸಲಾಗಿದೆ ಎಂದರು.
ಕಲಾವಿದ ನಾರಾಯಣ ಭಾದ್ರಿ, ನಾಟಕಕಾರ ಗದಿಗೆಯ್ಯ ಹಿರೇಮಠ, ಜಾನಪದ ಕಲಾವಿದ ಹಜರೇಸಾಬ ನದಾಫ ಮಾತನಾಡಿದರು.
ಮೈಸೂರ ದಸರಾದಲ್ಲಿ ಪಾಲ್ಗೊಂಡ ತಬಲಾ ಪಟುಗಳನ್ನು ಸನ್ಮಾನಿಸಲಾಯಿತು. ಆಶ್ರಮದ ಉಪಾಧ್ಯಕ್ಷ ಬಸವರಾಜ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಿ.ಎಂ. ಮಠದ ನಿರೂಪಿಸಿದರು, ಪ್ರಭು ರೋಣದ ವಂದಿಸಿದರು.