ಮಹಿಳೆಯರು ಉದ್ಯಮಿಗಳಾಗಲು ಸಹಕಾರ

17 mlv 1
ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಗ್ರಾಮದಲ್ಲಿ ಸಂಜೀವಿನಿ ಒಕ್ಕೂಟದಿಂದ ಸೋಮವಾರ ಹಮ್ಮಿಕೊಂಡಿದ್ದ ಮಾಸಿಕ ಸಂತೆ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ಸಿದ್ದರಾಜು ಉದ್ಘಾಟಿಸಿದರು. ಮಹದೇವಪ್ಪ, ಬಿ.ಆರ್.ಸಿದ್ದರಾಜು, ಚಂದ್ರಮ್ಮ, ಗಿರೀಶ್, ಸುರೇಖಾ, ಸೌಭಾಗ್ಯಮ್ಮ, ಸೌಮ್ಯಾ, ನಿಂಗರಾಜು, ಮಹದೇವಸ್ವಾಮಿ ಇದ್ದರು.
Published on

ಮಳವಳ್ಳಿ: ಮಹಿಳೆಯರು ಉದ್ಯಮಿಗಳಾಗುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕೆಂಬ ಸದುದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಂಜೀವಿನಿ ಒಕ್ಕೂಟದ ಯೋಜನೆಯನ್ನು ಗ್ರಾಮೀಣ ಸದ್ಬಳಕೆ ಮಾಡಿಕೊಳ್ಳುವಂತೆ ಬಿ.ಜಿ.ಪುರ ಗ್ರಾಪಂ ಪಿಡಿಒ ಜಯಸ್ವಾಮಿ ತಿಳಿಸಿದರು.

ತಾಲೂಕಿನ ಬಿ.ಜಿ.ಪುರ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸಂಜೀವಿನಿ ಒಕ್ಕೂಟ ಮತ್ತು ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ವತಿಯಿಂದ ಸೋಮವಾರ ಗ್ರಾಮದ ಪ್ರಮುಖ ವೃತ್ತದಲ್ಲಿ ಆಯೋಜಿಸಿದ್ದ ಮಾಸಿಕ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಣ್ಣು ಕುಟುಂಬದ ಕಣ್ಣು ಎಂಬ ನಾಣ್ಣುಡಿಯಂತೆ ಮಹಿಳೆಯರು ಸಂಸಾರದ ಎಲ್ಲ ರೀತಿಯ ಹೊಣೆಗಾರಿಯನ್ನು ನಿರ್ವಹಣೆ ಮಾಡುವ ಕೌಶಲ ಜನ್ಮದತ್ತವಾಗಿ ಬಂದಿದ್ದು, ಎಲ್ಲವನ್ನು ನಿಭಾಯಿಸುವ ಆತ್ಮಸ್ಥೈರ್ಯವೂ ಅವರಲ್ಲಿ ಅಡಕವಾಗಿದೆ. ಇಂತಹ ದೃಢತೆ ಹಾಗೂ ಮನೋಬಲ ಹೊಂದಿರುವ ಸ್ತ್ರೀಯರು ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶಗಳು ಸಿಗದಂತಹ ಕಾಲಘಟ್ಟವಿತ್ತು. ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರವೇ ಮಹಿಳೆಯರನ್ನು ಉದ್ಯಮಿಗಳನ್ನಾಗಿಸಲು ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ತಿಳಿಸಿದರು.

ಸ್ತ್ರೀ ಶಕ್ತಿಗೆ ಬಲ ತುಂಬಲು ಹಣಕಾಸು ಸಹಕಾರದ ಜತೆಗೆ ಕೌಶಲ ಅಭಿವೃದ್ಧಿ ತರಬೇತಿ ನೀಡುವುದು. ಮಹಿಳೆಯರು ಮನೆಗಳಲ್ಲೇ ಸಿದ್ಧಪಡಿಸುವ ಕರಕುಶಲ ವಸ್ತುಗಳು ಮತ್ತು ತಿಂಡಿ-ತಿನಿಸುಗಳ ಮಾರಾಟಕ್ಕೆ ಆಯಾ ಗ್ರಾಪಂ ವ್ಯಾಪ್ತಿಗಳಲ್ಲಿ ಹಳ್ಳಿ ಸಂತೆ ಎಂಬ ಪರಿಕಲ್ಪನೆಯಡಿ ಮಾರಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದ್ದು, ಇದರ ಸದುಪಯೋಗವನ್ನು ಮಹಿಳಾ ಉದ್ಯಮಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮಾಸಿಕ ಸಂತೆಯಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳಾ ಸಂಘಗಳ ಸದಸ್ಯರು ಭಾಗವಹಿಸಿ ತಾವುಗಳು ತಯಾರಿಸಿದ್ದ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷ ಸಿದ್ದರಾಜು ವಹಿಸಿದ್ದರು. ಸದಸ್ಯರಾದ ಮಹದೇವಪ್ಪ, ಬಿ.ಆರ್.ಸಿದ್ದರಾಜು, ಚಂದ್ರಮ್ಮ, ಗ್ರಾಪಂ ಕಾರ್ಯದರ್ಶಿ ಗಿರೀಶ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುರೇಖಾ, ಕಾರ್ಯದರ್ಶಿ ಸೌಭಾಗ್ಯಮ್ಮ, ಎನ್‌ಆರ್‌ಎಲ್ ಯೋಜನೆ ವ್ಯವಸ್ಥಾಪಕರಾದ ಸೌಮ್ಯಾ, ನಿಂಗರಾಜು, ವಲಯ ಮೇಲ್ವಿಚಾರಕ ಮಹದೇವಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net