ಖಾಸಗಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಮಾಸಿಕ ಸಂತೆ

21 HANUR 1
Published on

ಹನೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಆಯೋಜಿಸಿದ್ದ ಮಾಸಿಕ ಸಂತೆಯಿಂದ ಸಾರ್ವಜನಿಕರು ಸಂಚರಿಸಲು ತೊಂದರೆ ಅನುಭವಿಸಿದರು. ಈ ಬಗ್ಗೆ ಜನರಿಂದ ಆಕ್ಷೇಪ ವ್ಯಕ್ತವಾಯಿತು.

ಪಟ್ಟಣ ಪಂಚಾಯಿತಿ ವತಿಯಿಂದ ಖಾಸಗಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಇಲ್ಲಿ ಬಸ್‌ಗಳು ನಿಲುಗಡೆಯಾಗಿ ಗ್ರಾಮಗಳತ್ತ ಸಂಚರಿಸುತ್ತವೆ. ಹಾಗಾಗಿ ಇಲ್ಲಿ ಯಾವುದೇ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ. ಈ ಬಗ್ಗೆ ತಿಳಿದಿದ್ದರೂ ತಾಲೂಕು ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳಾ ಒಕ್ಕೂಟದ ವತಿಯಿಂದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಸಲುವಾಗಿ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್ ಉದ್ದಕ್ಕೂ ಶಾಮಿಯಾನ ಹಾಕಿ ಮಾಸಿಕ ಸಂತೆ ಆಯೋಜಿಸಿದ್ದರು.

ತಾಲೂಕು ಪಂಚಾಯಿತಿ ಇಒ ಉಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಜೆ 4ರವರೆಗೂ ನಡೆಯಿತು. ಪರಿಣಾಮ ಬಸ್‌ಗಳು ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಲು ಸಾಧ್ಯವಾಗದೆ ಎಲ್ಲೆಂದರಲ್ಲಿ ನಿಲ್ಲುವಂತಾಯಿತು. ಬಸ್‌ಗೆ ತೆರಳಲು ಜನರು ತೊಂದರೆಪಟ್ಟರು.

ಬೇರೆಡೆ ಆಯೋಜನೆಗೆ ಒತ್ತಾಯ: ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಮಾಸಿಕ ಸಂತೆಯನ್ನು ಆಯೋಜಿಸುವುದು ಉತ್ತಮ ಬೆಳವಣಿಗೆ. ಆದರೆ ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಸಂತೆಯನ್ನು ಆಯೋಜಿಸುವುದರಿಂದ ಜನರಿಗೆ ತೊಂದರೆಯಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಂತೆಯನ್ನು ಬೇರೆಡೆ ಆಯೋಜಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತು.

ಚಾಮರಾಜನಗರ, ಖಾಸಗಿ, ಬಸ್ ನಿಲ್ದಾಣ, ಮಾಸಿಕ ಸಂತೆ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net