

ಕುಂಬಳೆ: ಕರಾವಳಿಯ ಕೊಂಕಣಿ ಕೆಥೋಲಿಕ್ ಕ್ರೈಸ್ತರ ಕುಟುಂಬ ಹಬ್ಬವಾದ ತೆನೆಹಬ್ಬವನ್ನು ಭಾನುವಾರ ಆಚರಿಸಲಾಯಿತು. ಹಬ್ಬದ ಅಂಗವಾಗಿ ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಮಾತೆಯ ಗ್ರೋಟ್ಟೋದ ಬಳಿ ಬಾಲೆ ಮರಿಯಮ್ಮಗೆ ಹೂವುಗಳನ್ನು ಅರ್ಪಿಸಿ, ಸ್ತುತಿಗೀತೆಗಳನ್ನು ಹಾಡಿ ನಮಿಸಲಾಯಿತು.
ಇಗರ್ಜಿಯ ಧರ್ಮಗುರು ಹೆರಾಲ್ಡ್ ಡಿಸೋಜ ತೆನೆಗಳ ಆಶೀರ್ವಚನ ನಡೆಸಿದರು. ಸಹಾಯಕ ಧರ್ಮಗುರು ಕ್ಲೋಡ್ ಕೋರ್ಡಾ ಉಪಸ್ಥಿತರಿದ್ದರು. ಬಳಿಕ ಮಾತೆಯ ನಾಮಕ್ಕೆ ಸ್ತುತಿಗೀತೆಗಳನ್ನು ಹಾಡುತ್ತಾ ಆಶೀರ್ವದಿತ ತೆನೆಗಳೊಂದಿಗೆ ಮೆರವಣಿಗೆಯ ಮೂಲಕ ದೇವಾಲಯಕ್ಕೆ ಪ್ರವೇಶಿಸಿ ತೆನೆಹಬ್ಬದ ಸಂಭ್ರಮಾರ್ಥ ದಿವ್ಯ ಬಲಿಪೂಜೆ ನಡೆಯಿತು.
ಭಾರತೀಯ ಕಥೋಲಿಕ್ ಯುವಸಂಚಲನ ಪೆರ್ಮುದೆ ಘಟಕ ಆಯೋಜಿಸಿದ ಕ್ರಿಯೇಟಿವ್ ಕ್ಯಾನ್ವಸ್ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಧರ್ಮಗುರು ಬಹುಮಾನ ವಿತರಿಸಿದರು. ಹಬ್ಬದ ಸಂಕೇತವಾಗಿ ಕಬ್ಬು ವಿತರಣೆ ನಡೆಯಿತು.
ಹಬ್ಬದ ಪೂರ್ವಭಾವಿಯಾಗಿ ಒಂಬತ್ತು ದಿನ ಮೇರಿ ಮಾತೆಯ ನೊವೆನಾ, ಕನ್ಯಾಮರಿಯಮ್ಮಳಿಗೆ ಪುಷ್ಪಾರ್ಚನೆ, ವಿಶೇಷ ಪ್ರಾರ್ಥನೆ ನಡೆಯಿತು.