

ವಿಜಯವಾಣಿ ಸುದ್ದಿಜಾಲ ಕೊಕ್ಕಡ
ಕೊಕ್ಕಡದ ಕೌಕ್ರಾಡಿಯ ಸಂತ ಜೋನರ ದೇವಾಲಯ ಮಾತೆ ಮರಿಯಮ್ಮ ಜನ್ಮದಿನ ಮತ್ತು ತೆನೆ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ತೆನೆಗಳನ್ನು ಆಶೀರ್ವದಿಸುವ ಕಾರ್ಯವನ್ನು ಅಶೋಕ್ ಡಿಸೋಜ ನಡೆಸಿಕೊಟ್ಟರು. ಚರ್ಚಿನ ಧರ್ಮಗುರು ಅನಿಲ್ ಪ್ರಕಾಶ್ ಡಿಸಿಲ್ವಾ ಮಾತೆ ಮರಿಯಮ್ಮಗೆ ಪುಷ್ಪಾರ್ಚನೆ ನಡೆಸಿದರು. ಇವರೊಂದಿಗೆ ವಿನೀತ್ ವಿನ್ಸೆಂಟ್ ಪಿರೇರಾ ಸಹಕಾರ ನೀಡಿದರು. ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು. ಬಲಿಪೂಜೆಯನ್ನು ಪ್ರಧಾನ ಯಾಜಕರಾಗಿ ಅನಿಲ್ ಪ್ರಕಾಶ್ ಡಿಸಿಲ್ವಾ ನಿರ್ವಹಿಸಿ ಪ್ರವಚನ ನೀಡಿದರು. ಸಹಯಾಜಕರಾಗಿ ವಿನೀತ್ ವಿನ್ಸೆಂಟ್ ಪಿರೇರಾ ಮತ್ತು ಅಶೋಕ್ ಡಿಸೋಜ ವಿಧಿವಿಧಾನಗಳನ್ನು ನಡೆಸಿಕೊಟ್ಟರು. ಈ ಹಿಂದೆ ನಡೆದ ನೊವೆನಾ ಮತ್ತು ಈ ದಿನದ ಕಾರ್ಯದಲ್ಲಿ ಹೂ ಅರ್ಪಿಸಿದ ಮಕ್ಕಳನ್ನು ಹಾಗೂ ಹಿರಿಯರನ್ನು ಮತ್ತು ಸಿಹಿ ತಿಂಡಿ ಮತ್ತು ಕಬ್ಬು ನೀಡಿದ ದಾನಿಗಳನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.
ಬಲಿಪೂಜೆಯ ನಂತರ ದೇವಾಲಯದ ನೂತನ ಜಾಲತಾಣವಾದ www.kokkadachurch.in ಅನ್ನು ಉದ್ಘಾಟಿಸಿ ಜಾಲತಾಣ ಸೃಷ್ಟಿಸಿದ ಸಿಲ್ವೆಸ್ಟರ್ ಡಿಸೋಜ ಅವರನ್ನು ಅಭಿನಂದಿಸಿದರು. ದೇವಾಲಯದ ಪಾಲನಾ ಪರಿಷತ್ ಸದಸ್ಯರಿಗೆ ಧರ್ಮಗುರುಗಳು ತೆನೆಗಳನ್ನು ವಿತರಿಸಿದರು. ಭಕ್ತಾದಿಗಳಿಗೆ ಆರು ವಾಳ್ಯಗಳ ಗುರಿಕಾರರು ತೆನೆ ಹಂಚಿದರು. ದೇವಾಲಯದ ಆವರಣದಲ್ಲಿ ವೈಸಿಎಸ್ ಮತ್ತು ಐಸಿವೈಎಂ ಸದಸ್ಯರು ಮುಂಚಿತವಾಗಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಐಸಿವೈಎಂ ಸದಸ್ಯರು ಎಲ್ಲರಿಗೂ ಕಬ್ಬು ವಿತರಿಸಿದರು. ಯುವಕರ ಬ್ರಾಸ್ ಬ್ಯಾಂಡ್ ವಾದನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.