

ಬೆಂಗಳೂರು: ರಾಜ್ಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯ ‘ಮಾನ್‌ಸೂನ್ ಜಲಪಾತ ಛಾಯಾಗ್ರಹಣ ಸ್ಪರ್ಧೆ’ಯನ್ನು ಆಯೋಜಿಸಿದೆ.
ಪ್ರಸ್ತುತ ಮಳೆಗಾಲದಲ್ಲಿ ಎಲ್ಲ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು, ಕರ್ನಾಟಕ ರಾಜ್ಯವು ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಘೋಷವಾಕ್ಯಕ್ಕೆ ಪೂರಕವಾಗುವಂತೆ, ರಾಜ್ಯದಲ್ಲಿ ನೈಸರ್ಗಿಕ, ಪಾರಂಪರಿಕ, ವನ್ಯಜೀವಿ, ಧಾರ್ಮಿಕ, ರಮಣೀಯ ಜಲಪಾತ ಹಾಗೂ ಐತಿಹಾಸಿಕ ಪ್ರವಾಸಿ ತಾಣಗಳು ಸೇರಿ ಅತ್ಯಂತ ಆಕರ್ಷಣೀಯ ಪ್ರವಾಸಿ ತಾಣಗಳಿಂದ ಕೂಡಿವೆ. ಈ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ರಾಜ್ಯದಲ್ಲಿನ ಜಲಪಾತಗಳಿಗೆ ಭೇಟಿ ನೀಡಿ, ಜಲಪಾತಗಳ 30-60 ಸೆಕೆಂಡ್‌ಗಳುಳ್ಳ ಅತ್ಯಾಕರ್ಷಕ ವೀಡಿಯೋ ಚಿತ್ರೀಕರಣವನ್ನು ಮಾಡಿ ಅದನ್ನು ಆ.30ರ ಒಳಗಾಗಿ ಕಳುಹಿಸಿಕೊಡಬಹುದು.
ಅತ್ಯುತ್ತಮ ಛಾಯಾಗ್ರಹಣದ ವಿಡಿಯೋಗಳನ್ನು ಆಯ್ಕೆ ಮಾಡಿ ಬಹುಮಾನಗಳನ್ನು ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ವಿಜೇತರುಗಳಿಗೆ ಮೊದಲನೇ ಬಹುಮಾನವಾಗಿ - ಜೆಎಲ್‍ಆರ್ ನಲ್ಲಿ 2 ದಿನ ಉಚಿತ ತಂಗುವಿಕೆ, 2ನೇ ಬಹುಮಾನವಾಗಿ ಕೆಎಸ್ಟಿಡಿಸಿಯಲ್ಲಿ 2 ದಿನ ಉಚಿತ ತಂಗುವಿಕೆ ಹಾಗೂ 2 ಸಮಾಧಾನಕರ ಬಹುಮಾನವಾಗಿ 1 ದಿನ ಕೆಎಸ್ಟಿಡಿಸಿಯಲ್ಲಿ ಮತ್ತು 1 ದಿನ ಜೆಎಲ್ಆರ್ನಲ್ಲಿ ಉಚಿತ ತಂಗುವಿಕೆ ವ್ಯವಸ್ಥೆ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.