ಚಳ್ಳಕೆರೆ ಬರ ಪೀಡಿತ ಎಂದು ಘೋಷಿಸಿ

dj clk raithara sabe
Published on

ಚಳ್ಳಕೆರೆ: ಮುಂಗಾರು ಮಳೆ ಕುಂಠಿತವಾಗಿರುವ ಕಾರಣ, ಚಳ್ಳಕೆರೆಯನ್ನು ಸರ್ಕಾರ ಈ ಕೂಡಲೇ ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುವುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮಳೆ ಕೊರತೆಯಿಂದ ಜುಲೈ ಮಾಸದಲ್ಲೂ ನಿಗದಿತ ಶೇಂಗಾ ಬಿತ್ತನೆ ಗುರಿ ಸಾಧನೆ ಆಗುತ್ತಿಲ್ಲ.

ಈಗಾಗಲೇ ಮುಂಗಾರು ಸಂಪೂರ್ಣ ಹಿನ್ನಡೆಯಾಗಿದೆ. ಇದರಿಂದ ರೈತಾಪಿ ವರ್ಗ ಕೃಷಿ ಚಟುವಟಿಕೆಗಳಿಂದ ಹಿಂದೆ ಸರಿಯುವಂತಾಗಿದೆ ಎಂದರು.

ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ 7 ಕೋಟಿ ವಿಮೆ ಹಣವನ್ನು ಬಿಡುಗಡೆ ಮಾಡಬೇಕು.

ಇತ್ತೀಚೆಗೆ ಅತಿವೃಷ್ಠಿ ಮಳೆಯಿಂದ ಬೆಳೆ ನಷ್ಟ ಮಾಡಿಕೊಂಡ ರೈತರಿಗೆ ಬೆಳೆ ಪರಿಹಾರ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪುಣ್ಯ ಸ್ಮರಣೆ: ಶಿವಮೊಗ್ಗದಲ್ಲಿ ಬುಧವಾರ (ಜು.19) ನಡೆಯಲಿರುವ ರಾಜ್ಯ ರೈತ ಸಂಘದ ಸಂಸ್ಥಾಪಕ, ಮಾಜಿ ಸಚಿವ ಎಚ್.ಎಸ್.ರುದ್ರಪ್ಪ ಪುಣ್ಯ ಸ್ಮರಣೆ ಕಾರ್ಯದಲ್ಲಿ ತಾಲೂಕಿನ ರೈತರು ಭಾಗವಹಿಸಲಿದ್ದಾರೆ.

ಗುಂಡೂರಾವ್ ಆಡಳಿತದಲ್ಲಿ ನರಗುಂದಲ್ಲಿ ನಡೆದ 139 ರೈತರ ಹತ್ಯಾಕಾಂಡವನ್ನು ಖಂಡಿಸಿ ಹೋರಾಟ ರೂಪಿಸಿದ ರುದ್ರಪ್ಪ ಅವರು, ವಿಧಾನಸೌಧದವರೆಗೆ ಪಾದಾಯಾತ್ರೆ ಮಾಡಿ ನೊಂದ ರೈತರಿಗೆ ನ್ಯಾಯ ಕೊಡಿಸಿದ ಧೀಮಂತ ನಾಯಕ ಎಂದರು.

ರೈತ ಸಂಘದ ಜಿ.ಎಚ್. ಹನುಮಂತಪ್ಪ, ಚನ್ನಕೇಶವ, ಸಣ್ಣ ಪಾಲಯ್ಯ, ಪೂಜಾರಿ ಚಂದ್ರಣ್ಣ, ಜಯಣ್ಣ, ತಿಪ್ಪೇಸ್ವಾಮಿ, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net