ಮುಂಗಾರು ಬಿತ್ತನೆ ಅವಧಿ ಮುಕ್ತಾಯವಾಗುತ್ತಿದ್ದರೂ ಮಳೆರಾಯನ ದರ್ಶನವಿಲ್ಲ…

LXR AGRI STORY
ಲಕ್ಷ್ಮೇಶ್ವರ ತಾಲೂಕಿನ ರಾಮಗೇರಿ ಭಾಗದಲ್ಲಿ ಹೆಸರು ಬೆಳೆ ಕಮರಿದೆ
Published on

ಲಕ್ಷ್ಮೇಶ್ವರ: ಉತ್ತಮ ಮಳೆ- ಬೆಳೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಮುಂಗಾರಿನ ರೋಹಿಣಿ ಹಾಗೂ ಮೃಗಶಿರ ಮಳೆಗಳು ಕೈಕೊಟ್ಟಿವೆ. ಇದರಿಂದ ರೈತರ ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಶೇಂಗಾ, ಹತ್ತಿ, ಉಳ್ಳಾಗಡ್ಡಿ, ಬೆಳ್ಳುಳ್ಳಿ ಬೆಳೆಯುವ ರೈತರ ಕನಸು ಚೂರಾಗಿದೆ.
ಮಳೆಗಾಗಿ ರೈತರು ಕಪ್ಪೆ, ಗೊಂಬೆ ಮದುವೆ, ಗುರ್ಜಿಪೂಜೆ, ಅನ್ನಸಂತರ್ಪಣೆ ಸೇರಿ ಅನೇಕ ಸಂಪ್ರದಾಯದೊಂದಿದೆ ದೇವರ ಮೊರೆ ಹೋದರೂ ಮಳೆರಾಯ ಕಣ್ತೆರೆಯುತ್ತಿಲ್ಲ.

ಹೆಸರು ಬೆಳೆಯತ್ತ ಇತ್ತು ರೈತರ ಚಿತ್ತ: ಇತ್ತೀಚಿನ ವರ್ಷಗಳಲ್ಲಿ ಹೆಸರು ಬೆಳೆ ರೈತರ ಪಾಲಿಗೆ ಲಾಭದಾಯಕವಾಗಿದೆ. ಕಡಿಮೆ ಖರ್ಚು, ಹೊಸ ತಳಿ, ಯಂತ್ರದ ಸಹಾಯದಿಂದ ಒಕ್ಕಲಿ, ಆಳಿನ ಸಮಸ್ಯೆ ಆಗದಿರುವುದು ಮತ್ತು ಉತ್ತಮ ಬೆಳೆ- ಬೆಲೆ ಸಿಗುತ್ತದೆ. ರೈತರ ಕೃಷಿ ಚಟುವಟಿಕೆ ಮತ್ತು ಕುಟುಂಬ ನಿರ್ವಹಣೆಗೆ ಹೆಸರು ಬೆಳೆ ಅನುಕೂಲವಾಗುತ್ತದೆ.

ಈ ವರ್ಷ ಕೇಂದ್ರ ಸರ್ಕಾರ ಹೆಸರು ಬೆಳೆಗೆ 8,560 ರೂ. ಮತ್ತು ಶೇಂಗಾಕ್ಕೆ ಪರಿಷ್ಕೃತ ಬೆಂಬಲ ಬೆಲೆ ಘೋಷಿಸಿದ್ದರಿಂದ ಬಹಳಷ್ಟು ರೈತರು ಹೆಸರು ಬೆಳೆಯುವ ನಿರ್ಧಾರ ಕೈಗೊಂಡಿದ್ದರು. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆಯ ಬೀಜ, ಗೊಬ್ಬರ ಖರೀದಿಸಿ ಕೈ ಸುಟ್ಟುಕೊಂಡಿದ್ದಾರೆ. ಪ್ರಮುಖ ಬೆಳೆಗಳನ್ನು ಬಿತ್ತನೆ ಮಾಡುವ ಕಾಲಾವಧಿ ಮುಗಿದಿದ್ದು, ಮುಂದೇನು? ಎಂಬ ಚಿಂತೆಯಲ್ಲಿದ್ದಾರೆ.

ಬಿತ್ತನೆ ಕ್ಷೇತ್ರ-ಮಳೆ ಕೊರತೆ: ತಾಲೂಕಿನಲ್ಲಿ 10,760 ಹೆಕ್ಟೇರ್ ಏಕದಳ ಧಾನ್ಯ, 14,170 ಹೆಕ್ಟೇರ್ ದ್ವಿದಳ ಧಾನ್ಯ, 1,000 ಹೆಕ್ಟೇರ್ ಎಣ್ಣೆಕಾಳು, 11,500 ವಾಣಿಜ್ಯ ಬೆಳೆ ಸೇರಿ ಒಟ್ಟು 35,670 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಅದರಲ್ಲಿ ಕೆಲ ಭಾಗದಲ್ಲಾದ ಚದುರಿದ ಮಳೆ ಮತ್ತು ನೀರಾವರಿ ಕ್ಷೇತ್ರ ಸೇರಿ ಶೇ. 10ರಷ್ಟು ಬಿತ್ತನೆಯಾಗಿದೆ. ಆದರೆ, ಖುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಿದ ಬೆಳೆ ಒಂದಷ್ಟು ಹುಟ್ಟಿ ಕಮರುತ್ತಿದ್ದರೆ, ಮತ್ತಷ್ಟು ನೆಲದಲ್ಲೇ ಹಾಳಾಗಿದೆ. ಜೂನ್ 2ನೇ ವಾರಕ್ಕೆ ಆಗಬೇಕಿದ್ದ 150 ಮಿ.ಮೀ. ವಾಡಿಕೆ ಮಳೆಗೆ ಸರಾಸರಿ 60 ಮಿ.ಮೀ. ಆಗಿದ್ದು, ಶೇ.70ರಷ್ಟು ಮಳೆ ಕೊರತೆಯಾಗಿದೆ.

ಹೋದ ವರ್ಷ ಮಳೆ ಹೆಚ್ಚಾಗಿ ಬೆಳೆಯಲ್ಲಾ ಹಾಳಾಗಿತ್ತು. ಈ ವರ್ಷ ಹಿಂಗಾತು. ಹಿಂಗಾದ್ರ ರೈತರು ಹೆಂಗ ಬದಕಬೇಕ್ರೀ. ಮನೀ ಹೊಲ ಅಲ್ದ ಲಾವಣಿ, ಬಡ್ಯಾಗ ಹೊಲ ಮಾಡಿ ಹೊಲಾ ಹಸನ ಮಾಡಾಕ, ಬೀಜ, ಗೊಬ್ಬರಕ್ಕಂತ ಸಾವಿರಾರ ರೂ. ಕಳಕೊಂಡೇವಿ. ಮಳೆಯಾದೀತೆಂದು ಬಿತ್ತಿದ ಬೆಳೆ ಒಣಗಿದೆ. ಬ್ಯಾಂಕಿನ ಸಾಲ, ಕೈಗಡ ಸಾಲ ಬೆಳ್ಯಾಕಂತಾವ. ಮಕ್ಕಳ ಸಾಲಿ ಕಲಸೋದ ಹೆಂಗ. ಬದುಕು ನಡಸೋದ ಹೆಂಗ. ಸರ್ಕಾರ ರೈತರ ಕಷ್ಟಕ್ಕ ಸ್ಪಂದಿಸಬೇಕು.-ವಿರೂಪಾಕ್ಷಪ್ಪ ಆದಿ, ಬಾಪೂಗೌಡ ಪಾಟೀಲ, ಹನಮಂತಪ್ಪ ಚಿಂಚಲಿ, ಬಸವರಾಜ ಬೆಟಗೇರಿ, ರೈತರು ಮುಂಗಾರಿನ ಪ್ರಮುಖ ಬೆಳೆಗಳಾದ ಹೆಸರು, ಗೆಜ್ಜೆ, ಶೇಂಗಾ, ಹತ್ತಿ ಇತರ ಬೆಳೆಗಳ ಬಿತ್ತನೆ ಅವಧಿ ಮುಗಿದಿದೆ. ನೀರಾವರಿ ಸೇರಿ ಶೇ. 10ಕ್ಕಿಂತ ಹೆಚ್ಚು ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಸದ್ಯಕ್ಕೆ ಸಮೃದ್ಧ ಮಳೆಯಾದರೆ ಮಾತ್ರ ಬಳ್ಳಿ ಶೇಂಗಾ, ಗೋವಿನಜೋಳ ಬಿತ್ತನೆ ಮಾಡಬಹುದು. ಮಳೆಯಾಗುವವರೆಗೂ ರೈತರು ಬಿತ್ತನೆಗೆ ಮುಂದಾಗಬಾರದು. ಮಳೆ ಕೊರತೆ ಬಗ್ಗೆ ಇಲಾಖೆಗೆ ಸಂಪೂರ್ಣ ವರದಿ ಸಲ್ಲಿಸಲಾಗಿದೆ.-ರೇವಣಪ್ಪ ಮನಗೂಳಿ, ಸಹಾಯಕ ಕೃಷಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net