ಮುಂಗಾರು ಬಿತ್ತನೆ ಜೋರು

6-SGN-1
Published on

ಶಿಗ್ಗಾಂವಿ: ತಾಲೂಕಿನಲ್ಲಿ ಅವಧಿ ಪೂರ್ವದಲ್ಲಿ ಹದಭರಿತ ಮುಂಗಾರು ಮಳೆಯಾಗಿರುವುದರಿಂದ ಜಮೀನುಗಳನ್ನು ಹದ ಮಾಡಿಕೊಂಡ ಬಹುತೇಕ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.

ಶಿಗ್ಗಾಂವಿ ತಾಲೂಕಿನಾದ್ಯಂತ ಮೇ ತಿಂಗಳು ವಾಡಿಕೆಯ 68 ಮಿ.ಮೀ. ಮಳೆಯ ಪ್ರಮಾಣದಲ್ಲಿ, ಮೇ ಮಧ್ಯಂತರದಲ್ಲಿ 126 ಮಿ.ಮೀ. ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಮಳೆಯಿಂದ ಆತಂಕಗೊಂಡಿದ್ದ ರೈತ ಸಮುದಾಯ ಕೊನೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದರಿಂದ ಜೂನ್ ಮೊದಲ ವಾರದಲ್ಲಿಯೇ ಬಿತ್ತನೆ ಕಾರ್ಯ ಮುಗಿಯುವ ಹಂತದಲ್ಲಿದೆ.

ಕೃಷಿ ಪ್ರದೇಶದ ಗುರಿ: ತಾಲೂಕಿನ ಶಿಗ್ಗಾಂವಿ, ಬಂಕಾಪುರ, ದುಂಡಸಿ ಹೋಬಳಿ ಮಟ್ಟದ ಪ್ರಸಕ್ತ ಸಾಲಿನಲ್ಲಿ 38448 ಹೆಕ್ಟೇರ್ ಮುಂಗಾರು ಮಳೆಯಾಶ್ರಿತ ಬಿತ್ತನೆಯ ಪ್ರದೇಶವಿದ್ದು, ಜೋಳ, ರಾಗಿ, ಹೆಸರು ಮತ್ತಿತರ ಬೀಜ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಈಗಾಗಲೇ ಬಂಕಾಪುರ ಹೋಬಳಿ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಮುಗಿದಿದ್ದು, ಬಿತ್ತಿರುವ ಶೇಂಗಾ, ಮೆಕ್ಕೆಜೋಳ ಬೀಜಗಳು ಮೊಳಕೆ ಒಡೆಯುವ ಮೊದಲೇ ಇಲಿಗಳು ತಿನ್ನುತ್ತಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇಲಿ ನಿಯಂತ್ರಣಕ್ಕೆ ರೈತರು ಬಿಲದ ಸುತ್ತ ಪಾಷಾಣ ಇಡುವುದರಿಂದ ತಕ್ಕ ಮಟ್ಟಿಗೆ ನಿಯಂತ್ರಣವಾಗುತ್ತದೆ. ಆದರೆ, ಇಲಿಗಳು ಪಾಷಾಣದ ವಾಸನೆಯನ್ನು ಬಹುಬೇಗ ಕಂಡು ಹಿಡಿದು ಬಿಡುತ್ತವೆ. ಹೀಗಾಗಿ ಇಲಿಗಳನ್ನು ಕೊಲ್ಲಲು ಜೈವಿಕ, ಸಾಂಪ್ರದಾಯಿಕ ವಿಧಾನ ಬಳಸಿ ನಿಯಂತ್ರಿಸಬಹುದು ಕೃಷಿ ಇಲಾಖೆ ಸಲಹೆ ನೀಡಿದೆ.

ಹದಭರಿತ ಮಳೆಯಾಗಿದ್ದು, ಮುಂಗಾರು ಬಿತ್ತನೆಗೆ ಪೂರಕ ವಾತಾವರಣವಿದೆ. ಕೃಷಿ ಇಲಾಖೆ ಮೂಲಕ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜ ಪೂರೈಸಲಾಗುತ್ತಿದೆ. ಇನ್ನೊಂದು ವಾರದಲ್ಲಿ ಬಿತ್ತನೆ ಪ್ರಕ್ರಿಯೆ ಮುಗಿಯಲಿದೆ. ರೈತರು ಕೇವಲ ಒಂದು ಅಥವಾ ಎರಡು ಪೋಷಕಾಂಶ ಒದಗಿಸುವ ಯೂರಿಯಾ ಹಾಗೂ ಡಿಎಪಿಯನ್ನು ರೂಢಿಗತವಾಗಿ ಬಳಸುತ್ತಿದ್ದಾರೆ. ಇವುಗಳಲ್ಲಿ ಸಾರಜನಕ ಮತ್ತು ರಂಜಕದ ಅಂಶ ಮಾತ್ರವಿದ್ದು, ಪೊಟ್ಯಾಷ್ ಲಭ್ಯ ಇರುವುದಿಲ್ಲ. ಪೊಟ್ಯಾಷ್ ಅಂಶವು ಬೆಳೆಗಳಿಗೆ ರೋಗ ನಿರೋಧಕ ಶಕ್ತಿ ನೀಡಿ ಕಾಳಿನ ತೂಕ ಹೆಚ್ಚಿಸಲು ಅತ್ಯಂತ ಅವಶ್ಯವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ಶ್ರೇಣಿಯ ಸಾರಜನಕ, ರಂಜಕ ಮತ್ತು ಪೊಟ್ಯಾಷ್​ಯುುಕ್ತ ರಸಗೊಬ್ಬರಗಳು ಲಭ್ಯವಿವೆ. | ಕೊಟ್ರೇಶ ಗೆಜಲಿ, ಸಹಾಯಕ ಕೃಷಿ ನಿರ್ದೇಶಕ ಶಿಗ್ಗಾಂವಿ ಈ ವರ್ಷ ಬೇಗ ಆರಂಭವಾದ ಮುಂಗಾರು ಮಳೆಯಿಂದ ಬಿತ್ತನೆ ಮಾಡಿದ್ದೆ. ಆದರೆ, ಮೊಳಕೆಯೊಡೆಯುವ ಮೊದಲೇ ಇಲಿಗಳು ಎಲ್ಲವನ್ನೂ ತಿನ್ನುತ್ತಿವೆ. ಬೆಳೆ ಬೆಳೆಯುವ ಮೊದಲೇ ಚಿಂತೆಗೀಡು ಮಾಡಿದೆ. | ಮೌಲಾಸಾಬ ಪಠಾಣ, ಕುಂದೂರು ಗ್ರಾಮದ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net