ಗುಣಮಟ್ಟದ ಬಿತ್ತನೆ ಬೀಜ ಒದಗಿಸಿ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ

Monsoon related preparations review meeting Mandya
Published on

ಮಂಡ್ಯ: ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಲಿದ್ದು, ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜದ ತೊಂದರೆ ಉಂಟಾಗದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಮುಂಗಾರಿಗೆ ಸಂಬಂಧಿಸಿದ ಸಿದ್ಧತೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ ಉಂಟಾದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸಣ್ಣ ಪುಟ್ಟ ದುರಸ್ತಿಯಾಗಬೇಕಿರುತ್ತದೆ. ಅವುಗಳ ಬಗ್ಗೆ ಶೀಘ್ರವಾಗಿ ಕ್ರಮ ವಹಿಸಿ ಎಂದರು.

ಮನೆ ಹಾನಿಯಾದ ಸಂದರ್ಭದಲ್ಲಿ ಅವರಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ವಸತಿ ಒದಗಿಸಲು ಅವಕಾಶ ಇದ್ದಲ್ಲಿ ಆದ್ಯತೆ ನೀಡಿ. ಅಧಿಕಾರಿ ಹಾಗೂ ಸಿಬ್ಬಂದಿ ಕೇಂದ್ರ ಸ್ಥಾನದಲ್ಲಿದ್ದು, ರೈತರ ತೊಂದರೆಗಳಿಗೆ ಸ್ಪಂದಿಸಬೇಕು. ಯಾವುದಾದರೂ ತೊಂದರೆ ಉಂಟಾದ ಸಂದರ್ಭದಲ್ಲಿ ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ ಅವರು, ರೈತರಿಗೆ ಡಿಎಪಿ ರಸಗೊಬ್ಬರದ ಪರ್ಯಾಯವಾಗಿ ಹಸಿರೆಲೆ ಗೊಬ್ಬರವನ್ನು ಬಳಕೆ ಮಾಡುವ ಬಗ್ಗೆ ಅರಿವು ಮೂಡಿಸಿ. ಡಿಎಪಿ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಪೌಷ್ಠಿಕಾಂಶ ಕಡಿಮೆಯಾಗಿ ಇಳುವರಿ ಕಡಿಮೆಯಾಗುತ್ತದೆ ಎಂದರು.

ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಮಾತನಾಡಿ, ಹೋಬಳಿವಾರು ಕೆಲವು ಗ್ರಾಮಗಳಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ ರೈತರಿಗೆ ಅದರ ಅನುಗುಣವಾಗಿ ಬೆಳೆ ಬೆಳೆಯುವ ಬಗ್ಗೆ ಉತ್ತೇಜನೆ ನೀಡಿ. ಕೃಷಿ ಹಾಗೂ ಕೃಷಿ ಸಂಬಂಧಿಸಿದ ಇಲಾಖೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಡಿ.ಎ.ಪಿ ರಸಗೊಬ್ಬರದ ಪರ್ಯಾಯವಾಗಿ ಬೇರೆ ಗೊಬ್ಬರ ಬಳಸುವ ಬಗ್ಗೆ ತಿಳಿಸಿ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಮಳೆಯ ಪರಿಸ್ಥಿತಿ, ಮಳೆಯಿಂದ ಉಂಟಾಗಿರುವ ಬೆಳೆ, ಮನೆ ಹಾಗೂ ಪ್ರಾಣ ಹಾನಿ ಹಾಗೂ ಪಾವತಿಯಾಗಿರುವ ಪರಿಹಾರದ ಬಗ್ಗೆ, ಬೆಳೆ ಪರಿಸ್ಥಿತಿ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಬೆಳೆ ವಿಮೆಯ ಬಗ್ಗೆ ವಿವರಿಸಿದರು.

ಸಭೆಯಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮೈಷುಗರ್ ಅಧ್ಯಕ್ಷ ಗಂಗಾಧರ, ಡಿಸಿಎಂ ತಾಂತ್ರಿಕ ಸಲಹೆಗಾರ ಕೆ.ಜಯಪ್ರಕಾಶ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net