

ಬೆಂಗಳೂರು:ಪೂರ್ವ ಮುಂಗಾರು ಆರ್ಭಟಕ್ಕೆ ನಲುಗಿದ್ದ ರಾಜಧಾನಿಯಲ್ಲಿ ಭಾನುವಾರ ಜಿಟಿಜಿಟಿ ಮುಂಗಾರು ಮಳೆಯ ಸಿಂಚನವಾಗಿದೆ.
ರಾಜ್ಯದಲ್ಲಿ ನೈಋತ್ಯ ಮುಂಗಾರು ಪ್ರವೇಶಿಸಿ ದಿನದ ಬಳಿಕ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಪ್ರಮಾಣದಲ್ಲಿ ಮಳೆಯಾಯಿತು. ವಿದ್ಯಾರಣ್ಯಪುರ, ವಿ. ನಾಗೇನಹಳ್ಳಿ, ಬಸವನಪುರ, ಗುರುಡಾಚಾರ್ಪಾಳ್ಯ, ರಾಮಮೂರ್ತಿನಗರ, ಕಾಡುಗುಡಿ, ಬಿಟಿಎಂ ಲೇಔಟ್, ಕೆ.ಆರ್.ಪುರ, ಚಾಮರಾಜಪೇಟೆ, ಮೈಸೂರು ರಸ್ತೆ, ಬಸವನಗುಡಿ, ಆರ್.ಟಿ.ನಗರ, ಸಹಕಾರನಗರ, ಕೆ.ಆರ್. ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ಜಯನಗರ, ಬಸವನಗುಡಿ, ಮಲ್ಲೇಶ್ವರ, ಯಶವಂತಪುರ, ಮೈಸೂರು ರಸ್ತೆ ಸೇರಿ ನಗರದ ವಿವಿಧ ಬಡಾವಣೆಗಳಲ್ಲಿ ಮಳೆಯಾಯಿತು. ಕೆಲ ಬಡಾವಣೆಗಳಲ್ಲಿ ತುಂತುರು ಮಳೆಯಾದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಬಿರುಸಾಗಿ ಸರಿಯಿತು.
ನಗರದ ಪ್ರಮುಖ ಜಂಕ್ಷನ್, ಅಂಡರ್ಪಾಸ್ಗಳಲ್ಲಿ ತುಸು ಮಳೆನೀರು ನಿಂತಿತ್ತು. ಇದರ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನಸವಾರರು ಮಳೆಯಲ್ಲಿಯೇ ನೆನೆದುಕೊಂಡು ತೆರಳುತ್ತಿದ್ದರು. ಕೆಲ ರಸ್ತೆಗಳಲ್ಲಿ ಮಳೆನೀರು ನಿಂತಿದ್ದರಿಂದ ತುಸು ಸಂಚಾರ ಸಿಕ್ಕು ಉಂಟಾಯಿತು.
ಪಣತ್ತೂರು ಸೇತುವೆಯಿಂದ ಕಾಡುಬೀಸನಹಳ್ಳಿ ಕಡೆಗೆ, ಕಸ್ತೂರಿನಗರದಿಂದ ರಾಮಮೂರ್ತಿನಗರ ಕಡೆಗೆ, ದಾಲ್ಮೀಯಾದಿಂದ ವೆಗಾ ಸಿಟಿ ಮಾಲ್, ಹಾರೋಹಳ್ಳಿ ಮುಖ್ಯರಸ್ತೆಯಿಂದ ವಿಷ್ಣುವರ್ಧನ್ ರಸ್ತೆ ಕಡೆಗೆ ಹಲವೆಡೆ ಮಳೆನೀರು ನಿಂತಿದ್ದರಿಂದ ಸಂಚಾರ ಸಿಕ್ಕು ಉಂಟಾಯಿತು. ಎಚ್ಎಎಲ್ ವಿಮಾನ ನಿಲ್ದಾಣ ರಸ್ತೆಯಿಂದ ದೊಮ್ಮಲೂರು ಫ್ಲೈಓವರ್ ಕಡೆಗೆ, ಸ್ವಾಮಿ ವಿವೇಕಾನಂದ ರಸ್ತೆಯಿಂದ 80 ಅಡಿ ರಸ್ತೆ ಕಡೆಗೆ ಹಾಗೂ ವಸಂತನಗರದ ಅಂಡರ್ಪಾಸ್, ಐಟಿಟಿ ಭವನದಿಂದ ಬಾಣಸವಾಡಿ ಸರ್ವಿಸ್ ರಸ್ತೆ, ಹೆಬ್ಬಾಳ ರಸ್ತೆ, ಪುಟ್ಟೇನಹಳ್ಳಿ ಅಂಡರ್ಪಾಸ್, ಸಿಲ್ಕ್ ಬೋರ್ಡ್, ಕೆ.ಆರ್.ಪುರ ರಸ್ತೆಯಲ್ಲಿ ನೀರು ತುಂಬಿದ ಕಾರಣ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾರಾಂತ್ಯ ಹಿನ್ನೆಲೆಯಲ್ಲಿ ಹೊರಗಡೆ ತೆರಳಿದ್ದವರಿಗೆ ತೊಂದರೆಯಾಯಿತು.
29ರಿಂದ ಯೆಲ್ಲೋ ಅಲರ್ಟ್
ರಾಜಧಾನಿಯಲ್ಲಿ ಮೇ 29ರಿಂದ ಜೂ. 1ರವರೆಗೆ ಜೋರಾಗಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ಮುಂದಿನ ಮೂರು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ. ಕೆಲ ಬಡಾವಣೆಗಳಲ್ಲಿ ಮಳೆಗಿಂತ ರಭಸವಾಗಿ ಗಾಳಿ ಬೀಸುವ ಸಾಧ್ಯತೆ ಇದೆ. ಒಣಗಿದ ಮರ, ಕೊಂಬೆ ಬೀಳುವ ಸಾಧ್ಯತೆ ಇದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಇಲಾಖೆ ಸಲಹೆ ನೀಡಿದೆ.
ತಾಪಮಾನ ಕುಸಿತ: ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಗರಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಉಷ್ಣಾಂಶ ಕುಸಿತವಾಗಿದೆ. ವಾಡಿಕೆಯಂತೆ 33 ಡಿ.ಸೆ. ದಾಖಲಾಗಬೇಕಿತ್ತು. ಇದೀಗ 26.6 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಈ ಬಾರಿ ಬೇಗನೆ ಬೇಸಿಗೆ ಮುಗಿದಿದ್ದು, ಮಳೆಗಾಲ ಆರಂಭವಾಗಿದೆ. ಮೋಡ ಕವಿದ ವಾತಾವರಣ ಹಿನ್ನೆಲೆಯಲ್ಲಿ ಶೀತ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಥಂಡಿ ವಾತಾವರಣ ಅನುಭವವಾಗುತ್ತಿದೆ.