ಮಲೆನಾಡಿನ ಸೌಂದರ್ಯ ಹೆಚ್ಚಿಸಿದ ಮುಂಗಾರು ಮಳೆ

kls4
Published on

ಕಳಸ: ಕಣ್ಣಾಯಿಸಿದಷ್ಟು ದೂರ ಬೆಟ್ಟ-ಗುಡ್ಡಗಳ ಸಾಲು, ಹಸಿರು ಕಣಿವೆ, ಅದರ ನಡುವೆ ಜೀವಕಳೆ ತುಂಬಿ ಭೋರ್ಗರೆಯುವ ಜಲಪಾತ, ಮಂಜಿನ ಮುಸುಕು,ಇದು ಕಳಸ ತಾಲೂಕಿನಲ್ಲಿ ಕಾಣಸಿಗುವ ಮಳೆಗಾಲದ ಸೊಬಗು.

ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆ ಮಲೆನಾಡ ಹಸಿರು ಸೊಬಗನ್ನು ಹೆಚ್ಚಿಸಿದ್ದು, ನಿಸರ್ಗ ಪ್ರಿಯರಿಗೆ ಹಿತವಾದ ವಾತಾವರಣ ಸೃಷ್ಟಿಸಿದೆ. ಮಲೆಗಾಲ ಬಂದರೆ ಈ ಭಾಗ ಹಸಿರು ಹೊದ್ದು ಕಂಗೊಳಿಸುತ್ತದೆ. ಮಂಜು ಮುಸುಕಿದ ವಾತಾವರಣದಲ್ಲಿ ಮಿಂಚು ಹುಳದಂತೆ ಕಾಣುವ ವಾಹನಗಳ ದೀಪಗಳು ಇಲ್ಲಿ ಕನಸಿನ ಲೋಕವನ್ನು ಸೃಷ್ಟಿಸುತ್ತದೆ.

ಕುದುರೆಮುಖ ಅಭಯಾರಣ್ಯದ ಬೆಟ್ಟಗುಡ್ಡ, ಕಾಡು ಮೇಡಿಗೆ ಮಳೆ ಹಚ್ಚ ಹಸಿರಿನ ಮೆರುಗು ನೀಡಿದೆ. ನದಿ, ಹೊಳೆ, ಹಳ್ಳ, ಜರಿ ಜಲಪಾತಗಳಿಗೆ ಜೀವಕಳೆ ತುಂಬಿದ್ದು, ಜುಳು ಜುಳು ನಿನಾದ ಪುಳಕಿತಗೊಳಿಸುತ್ತಿದೆ. ಮುಂಗಾರು ಪ್ರಾರಂಭವಾದಾಗಿನಿಂದ ತಾಲೂಕಿನ ಪ್ರವಾಸಿ ತಾಣಗಳಾದ ಕ್ಯಾತನಮಕ್ಕಿ, ನೇತ್ರಾವತಿ ಶಿಖರ, ಕುದುರೆಮುಖ ಶಿಖರ, ಮೈದಾಡಿ ಗುಡ್ಡ, ಕುರುಂಜಲ್ ಗುಡ್ಡಗಳು ಹಸಿರ ಸೀರೆಯನ್ನುಟ್ಟು ಕಂಗೊಳಿಸಿದರೆ, ಸುರುಮನೆ ಜಲಪಾತ, ಕಡಂಬಿ ಜಲಪಾತ, ಹನುಮನಗುಂಡಿ ಜಲಪಾತ, ಎಳನೀರು ಜಲಪಾತ, ಭದ್ರಾನದಿಯ ಅಂಭಾ ತೀರ್ಥಗಳು ಮೈದುಂಬಿ ಹರಿಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net