ಕೈಕೊಟ್ಟ ಮುಂಗಾರು ಮಳೆ

sugar cane
Published on

ಬ್ಯಾಡಗಿ: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ತಾಲೂಕಿನ ರೈತರು ಚಿಂತೆಗೀಡಾಗಿದ್ದಾರೆ. ಜನ ಹಾಗೂ ಜಾನುವಾರುಗಳಿಗೆ ಸಮರ್ಪಕವಾಗಿ ಕುಡಿಯುವ ನೀರೂ ಸಿಗದಂತಾಗಿದೆ.

ಪ್ರಸಕ್ತ ವರ್ಷ ಜೂನ್ ಮೊದಲ ವಾರದಲ್ಲಿ ವಾಡಿಕೆಯಂತೆ 96 ಮಿಮೀ ಮಳೆ ಆಗಬೇಕಿತ್ತು. ಆದರೆ, ಜೂ. 20ರವರೆಗೆ ಕೇವಲ 10 ಮಿಮೀ. ಮಳೆಯಾಗಿದೆ. ಪರಿಣಾಮ ತಾಲೂಕಿನ ಎಲ್ಲ ಕೆರೆ, ಕಟ್ಟೆಗಳು ಖಾಲಿಯಾಗಿವೆ. ಅರೆಮಲೆನಾಡು ಪ್ರದೇಶವಾದ ಬ್ಯಾಡಗಿ ತಾಲೂಕಿನ ಕಾಗಿನೆಲೆ ಹೋಬಳಿ ಪ್ರದೇಶದಲ್ಲಿ ರೈತರು ಕಂಗಾಲಾಗಿದ್ದಾರೆ.
ಅತಿ ಕಡಿಮೆ ಮಳೆ ಬಿದ್ದ ಕಾರಣ ಬಿತ್ತನೆ ಕಾರ್ಯ ತೀವ್ರ ವಿಳಂಬವಾಗಿದೆ. ಬಹುತೇಕ ರೈತರು ಇಂದಿಗೂ ಭೂಮಿಯನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡಿಲ್ಲ.


ಪ್ರಸಕ್ತ ವರ್ಷ ಕೊಳವೆ ಬಾವಿಗಳು ಒಂದೊಂದಾಗಿ ಬತ್ತುತ್ತಿವೆ. ಈಗಾಗಲೇ ಶೇ. 50ರಷ್ಟು ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಕೆಲವೊಂದಿಷ್ಟು ಅರ್ಧ, ಒಂದಿಂಚು ನೀರನ್ನು ಹೊರ ಹಾಕುತ್ತಿವೆ. ನೀರಿನ ಕೊರತೆಯಿಂದಾಗಿ ಬೆಳೆದು ನಿಂತ ಕಬ್ಬು, ಎಲೆಕೋಸು, ತೆಂಗು, ಅಡಕೆ ಮತ್ತಿತರ ಬೆಳೆಗಳನ್ನು ಉಳಿಸಿಕೊಳ್ಳಲು ಆಗದ ಸ್ಥಿತಿ ಎದುರಾಗಿದೆ. ರೈತರು ಹೊಸದಾಗಿ ಕೊಳವೆ ಬಾವಿ ಕೊರೆಸಲು ಭಯಪಡುವಂತಾಗಿದೆ. ಬ್ಯಾಡಗಿ, ಕಾಗಿನೆಲೆ ಹೋಬಳಿಯ ನೀರಾವರಿ ರೈತರು 90 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದಾರೆ.

ತಾಲೂಕಿನಲ್ಲಿ 30,953 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈವರೆಗೆ ಒಣ ಬೇಸಾಯದವರು ಬೀಜ ಬಿತ್ತನೆಗೆ ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ತಾಲೂಕಿನ ಬ್ಯಾಡಗಿ, ಕಾಗಿನೆಲೆ, ಮೋಟೆಬೆನ್ನೂರು, ಚಿಕ್ಕಬಾಸೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟಕ್ಕೆ ಚಾಲನೆ ನೀಡಿ 15 ದಿನ ಕಳೆದಿವೆ. ಆದರೆ, ರೈತರು ಬೀಜ ಖರೀದಿಗೆ ಮುಂದಾಗುತ್ತಿಲ್ಲ. ಈವರೆಗೆ ಶೇ. 30ರಷ್ಟು ಬೀಜಗಳು ಮಾರಾಟವಾಗಿವೆ ಎನ್ನಲಾಗಿದೆ.

ತಾಲೂಕಿನಾದ್ಯಂತ ವಾಡಿಕೆ ಮಳೆ ಶೇ. 80ರಷ್ಟು ಕೊರತೆ ಇದೆ. ಹೀಗಾಗಿ, ರೈತರು ಬಿತ್ತನೆಗೆ ಮುಂದಾಗಿಲ್ಲ. ರೈತರು ಆತಂಕಪಡುವುದಕ್ಕಿಂತ ಸಿರಿಧಾನ್ಯ ಹಾಗೂ ಕಡಿಮೆ ಮಳೆಯಲ್ಲಿ ಬೆಳೆಯುವ ಬೆಳೆಗಳತ್ತ ಗಮನ ಹರಿಸಬೇಕು. ಹರಿದು ಹೋಗುವ ನೀರನ್ನು ಇಂಗಿಸುವುದು ಮತ್ತು ಸಂಗ್ರಹಿಸುವ ಕಾರ್ಯದಲ್ಲಿ ರೈತರು ತೊಡಗಬೇಕು.ಜಿ. ಶಾಂತಾಮಣಿ , ಸಹಾಯಕ ಕೃಷಿ ನಿರ್ದೇಶಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net