

ನರೇಗಲ್ಲ: ಹೋಬಳಿಯಾದ್ಯಂತ ಮುಂಗಾರು ಪೂರ್ವ ಕೃತಿಕಾ ಮಳೆ ಉತ್ತಮವಾಗಿ ಸುರಿದಿದ್ದು, ಬಿತ್ತನೆಗೆ ಭರದ ಸಿದ್ಧತೆ ನಡೆದಿದೆ.
ಪಟ್ಟಣ, ಕೋಡಿಕೊಪ್ಪ, ಕೋಚಲಾಪೂರ, ತೋಟಗಂಟಿ, ದ್ಯಾಂಪೂರ, ಮಲ್ಲಾಪೂರ, ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ಗುಜಮಾಗಡಿ, ಡ.ಸ. ಹಡಗಲಿ, ಜಕ್ಕಲಿ, ಬೂದಿಹಾಳ, ನಿಡಗುಂದಿ, ನಿಡಗುಂದಿಕೊಪ್ಪ, ಮಾರನಬಸರಿ, ಕಳಕಾಪೂರ, ಹಾಲಕೆರೆ ಸೇರಿದಂತೆ ಹೋಬಳಿಯ ಬಹುತೇಕ ಪ್ರದೇಶ ಮಳೆಯಾಶ್ರಿತವಾಗಿದೆ. ರೋಣ ತಾಲೂಕಿನಲ್ಲಿ ವಾಡಿಕೆ ಮಳೆ 81 ಮಿ.ಮೀ. ಇದ್ದು, 92.9 ಮಿ.ಮೀ. ಸುರಿದಿದೆ. ಗಜೇಂದ್ರಗಡ ತಾಲೂಕಿನಲ್ಲಿ ವಾಡಿಕೆ 59.7 ಮಿ.ಮೀ. ಎದುರಾಗಿ 83.5 ಮಿ.ಮೀ. ಮಳೆ ಬಿದ್ದಿದೆ.
ರೋಣ ತಾಲೂಕಿನಲ್ಲಿ ಜೋಳ 100, ಮೆಕ್ಕಜೋಳ 11500, ಸಜ್ಜೆ 275, ಸಿರಿಧಾನ್ಯ 55, ತೊಗರಿ 180, ಹುರುಳಿ 35, ಉದ್ದು 15, ಹೆಸರು 40410, ಅಲಸಂದಿ 35, ಅವರೆ 10, ಮಡಿಕೆ 10, ಶೇಂಗಾ 1350, ಎಳ್ಳು 80, ಸೂರ್ಯಕಾಂತಿ 600, ಗುರೆಳ್ಳು 30, ಸೋಯಾಬಿನ್ 10, ಹತ್ತಿ 750 ಹೆಕ್ಟೇರ್ ಸೇರಿ 56060 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. 615 ಹೆಕ್ಟೇರ್‌ನಲ್ಲಿ ಕಬ್ಬು ಬೆಳೆಯಲಾಗಿದೆ.
ಗಜೇಂದ್ರಗಡ ತಾಲೂಕಿನಲ್ಲಿ ಜೋಳ 560, ಮೆಕ್ಕಜೋಳ 8000, ಸಜ್ಜೆ 510, ಸಿರಿಧಾನ್ಯ 50, ತೊಗರಿ 150, ಹುರುಳಿ 40, ಉದ್ದು 15, ಹೆಸರು 19050, ಅಲಸಂದಿ 125, ಅವರೆ 24, ಶೇಂಗಾ 1140, ಎಳ್ಳು 20, ಸೂರ್ಯಕಾಂತಿ 230, ಗುರೆಳ್ಳು 10, ಸೋಯಾಬೀನ್ 0, ಹತ್ತಿ 710 ಹೆಕ್ಟೇರ್ ಸೇರಿ 30684 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ.
ಮೇ 24ರಂದು ರೋಹಿಣಿ ಮಳೆ ಪ್ರಾರಂಭವಾಗಿದ್ದು, ಮುಂಗಾರಿನ ಪ್ರಮುಖ ವಾಣಿಜ್ಯ ಬೆಳೆಯಾದ ಹೆಸರು ಬಿತ್ತನೆಗೆ ಬಹುತೇಕ ರೈತರು ಮುಂದಾಗಿದ್ದಾರೆ. ಕೃಷಿ ಇಲಾಖೆ ಅಗತ್ಯ ಬೀಜ-ಗೊಬ್ಬರ ಒದಗಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಹೆಸರು ಬೀಜ-ಗೊಬ್ಬರ ದಾಸ್ತಾನು ಮಾಡಿದೆ. ಕೆಲ ರೈತರು ಕೃತಿಕಾ ಮಳೆ ಕೊನೆಯ ಪಾದದಲ್ಲಿ ಬಿತ್ತನೆ ಮಾಡಿದ್ದಾರೆ.
ಕ್ಯೂ ಆರ್ ಕೋಡ್ ಸ್ಕ್ಯಾನಿಂಗ್: ಒಬ್ಬ ರೈತರಿಗೆ 5 ಎಕರೆಗೆ ಮಾತ್ರ ರಿಯಾಯತಿ ದರದಲ್ಲಿ ಬೀಜ ವಿತರಣೆಯಾಗುತ್ತದೆ. ರೈತರಿಗೆ ವಿತರಿಸಲಾಗುವ ಬೀಜಗಳನ್ನು ಪ್ರಸಕ್ತ ವರ್ಷದಿಂದ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವಿತರಿಸಲಾಗುತ್ತದೆ. ಇದರಿಂದ ಯಾವ ರೈತ, ಎಷ್ಟು ಬೀಜ ಖರೀದಿಸಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಅಲ್ಲದೆ, ರೈತರ ಮೊಬೈಲ್‌ಗೆ ಸಂದೇಶ ರವಾನೆಯಾಗಲಿದೆ. ಇದರಿಂದ ಬೀಜ ವಿತರಣೆಯಲ್ಲಿ ಆಗುತ್ತಿದ್ದ ವಂಚನೆ ತಪ್ಪಲಿದೆ.
ಬೀಜೋಪಚಾರಕ್ಕೆ ಸಲಹೆ: ಕಳೆದ ಐದಾರು ವರ್ಷಗಳಿಂದ ಹೆಸರು ಬೆಳೆಗೆ ಹಳದಿರೋಗ ಕಾಡುತ್ತಿದೆ. ಆದ್ದರಿಂದ ಈ ವರ್ಷದ ಬಿತ್ತನೆ ಸಮಯದಲ್ಲಿ ಹೆಚ್ಚುವರಿ ಬೀಜ ಬಳಸಬೇಕು. ಇದರಿಂದ ಬೀಜ ಮೊಳಕೆಯೊಡೆಯುವಿಕೆಯಲ್ಲಿ ವ್ಯತ್ಯಯವಾದರೂ ಸರಿದೂಗಿಸಬಹುದಾಗಿದೆ. ಹೆಸರು ಕಾಳಿಗೆ ಕಡ್ಡಾಯವಾಗಿ ಬೀಜೋಪಚಾರ ಮಾಡಬೇಕು. ಇದರಿಂದ ಸಾಕಷ್ಟು ರೋಗಗಳು ಬಾರದಂತೆ ತಡೆಗಟ್ಟಬಹುದಾಗಿದೆ ಎಂಬುದು ಕೃಷಿ ಅಧಿಕಾರಿಗಳ ಸಲಹೆಯಾಗಿದೆ.
ರೈತ ಸಂಪರ್ಕ ಕೇಂದ್ರದಿಂದ ರೈತರಿಗೆ ರಿಯಾಯತಿ ದರದಲ್ಲಿ ಹೆಸರು ಬಿತ್ತನೆ ಬೀಜ ವಿತರಣೆ ಪ್ರಾರಂಭಿಸಲಾಗಿದೆ. ರೋಣ ಮತ್ತು ಗಜೇಂದ್ರಗಡ ತಾಲೂಕಿಗೆ ಅಗತ್ಯವಿರುವಷ್ಟು ದಾಸ್ತಾನು ಲಭ್ಯವಿದೆ. ರವೀಂದ್ರಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ, ರೋಣ/ಗಜೇಂದ್ರಗಡ