ಕರಾವಳಿಯಲ್ಲಿ ಸಾಧಾರಣ ಮಳೆ-ಸೆಪ್ಟೆಂಬರ್ 6ರಿಂದ ಕರಾವಳಿ ಭಾಗಗಳಲ್ಲಿ ಮುಂಗಾರು ಬಲಗೊಳ್ಳುವ ಸಾಧ್ಯತೆ

RAIN
ಕರಾವಳಿಯಲ್ಲಿ ಸಾಧಾರಣ ಮಳೆ-ಸೆಪ್ಟೆಂಬರ್ 6ರಿಂದ ಕರಾವಳಿ ಭಾಗಗಳಲ್ಲಿ ಮುಂಗಾರು ಬಲಗೊಳ್ಳುವ ಸಾಧ್ಯತೆ
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆಯಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. ಸೋಮವಾರ ಬೆಳಗ್ಗೆ ಬೆಳ್ತಂಗಡಿ, ಚಾರ್ಮಾಡಿ, ಧರ್ಮಸ್ಥಳ, ಪುತ್ತೂರು ಭಾಗದಲ್ಲಿ ಮಳೆಯಾಗಿದೆ. ಮುಂದಿನ 2 ದಿನ ಕರಾವಳಿಯಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಐಎಂಡಿ ಮಾಹಿತಿಯಂತೆ ದ.ಕ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಯಲ್ಲಿ ಕರಾವಳಿಯಲ್ಲಿ 6.3 ಸರಾಸರಿ ಮಳೆಯಾಗಿದ್ದು, ಮೂಡುಬಿದಿರೆ 5.3 ಮಿ.ಮೀ ಹಾಗೂ ಸುಳ್ಯದಲ್ಲಿ 6.2 ಮಿ.ಮೀ, ಪುತ್ತೂರಿನಲ್ಲಿ 4.1 ಮಿ.ಮೀ, ಮಂಗಳೂರು 1.8 ಮಿ.ಮೀ, ಬೆಳ್ತಂಗಡಿ 7.1 ಮಿ.ಮಿ, ಕಡಬ 1.7 ಮಿ.ಮಿ, ಬಂಟ್ವಾಳ 6.5 ಮಿ.ಮೀ ಮಳೆಯಾಗಿದೆ.

ಮಂಗಳವಾರ ಕಾಸರಗೋಡು ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಲ್ಲಲ್ಲಿ ಸದಾರಣಕ್ಕಿಂತ ಉತ್ತಮ ಮಳೆಯ ಮುನ್ಸೂಚನೆ ಇದೆ. ಉಳಿದ ಕರ್ನಾಟಕದ ಭಾಗಗಳಲ್ಲಿ ಹಗುರವಾಗಿ ಮೋಡದ ವಾತಾವರಣದ ಮುನ್ಸೂಚನೆ ಇದೆ. ಪಶ್ಚಿಮಘಟ್ಟದ ಕೆಳಗಿನ ತಪ್ಪಲು ಪ್ರದೇಶಗಳಲ್ಲಿ ಸಂಜೆ ಅಲ್ಲಲ್ಲಿ ಗುಡುಗು ಸಹಿತ ಒಂದೆರಡು ಸಾಮಾನ್ಯ ಮಳೆಯ ಸಾಧ್ಯತೆ ಇದೆ. ಮುಂದಿನ 24 ಗಂಟೆಗಳಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಹಲವು ಕಡೆಗಳಲ್ಲಿ ಗಾಳಿ ಸಹಿತ ಗುಡುಗು ಮಿಂಚಿನ ಸಾಧ್ಯತೆಯಿದೆ ಎಂದು ಐಎಂಡಿ ಮಾಹಿತಿ ನೀಡಿದೆ.

ಮುಂಗಾರು ಬಲಗೊಳ್ಳುವ ಸಾಧ್ಯತೆ

ಸೆಪ್ಟೆಂಬರ್ 6ರಿಂದ ಕರಾವಳಿ ಭಾಗಗಳಲ್ಲಿ ಸ್ವಲ್ಪ ಚುರುಕಾಗುವ ಲಕ್ಷಣಗಳಿದ್ದು, ಸೆ.10ರಿಂದ ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನ ಭಾಗಗಳಲ್ಲಿಯೂ ಮುಂಗಾರು ಬಲಗೊಳ್ಳುವ ಸಾಧ್ಯತೆ ಇದೆ. ಸೆ.6 ಹಾಗೂ 7 ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ 3ನೇ ವಾರದಲ್ಲಿ ಉತ್ತಮ ಮಳೆಯ ಮುನ್ಸೂಚನೆ ಇದೆ. ಈಗಿನ ಮುನ್ಸೂಚನೆಯಂತೆ ಸಧ್ಯಕ್ಕೆ ಬಂಗಾಳಕೊಲ್ಲಿಯಲ್ಲಾಗಲಿ ಅರಬ್ಬಿ ಸಮುದ್ರದಲ್ಲಾಗಲಿ ಯಾವುದೇ ವಾಯುಭಾರ ಕುಸಿತಗಳ ಲಕ್ಷಣಗಳಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net