

ಮಡಿಕೇರಿ:
ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ವಾತಾವರಣವೇ ಸಂಪೂರ್ಣ ಬದಲಾಗಿದೆ. ಕೃಷಿಗೆ ಪೂರಕ ವಾತಾವರಣ ನಿರ್ಮಾಣ ಆಗಿರುವುದರಿಂದ ರೈತರೂ ತಮ್ಮನ್ನು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊಡಗಿನಲ್ಲಿ ಈ ಬಾರಿ ಕಳೆದ ವರ್ಷಕ್ಕಿಂತ ಸುಮಾರು ಶೇ. ೪೦ರಷ್ಟು ಹೆಚ್ಚು ಮಳೆಯಾಗಿದ್ದು, ಈ ಮುಂಗಾರು ಆಶಾದಾಯಕವಾಗುವ ನಿರೀಕ್ಷೆ ಮೂಡಿಸಿದೆ.
ಮಳೆ ನಕ್ಷತ್ರದ ಪ್ರಕಾರ ಈಗ ಮೃಗಶಿರ ಮಳೆ ಆಗುತ್ತಿದ್ದು, ಈ ಮಳೆ ಕುದುರೆ ಮೇಲೆ ಬರುತ್ತದೆ ಎನ್ನುವುದು ಜಾನಪದರ ನಂಬಿಕೆ. ಸಾಮಾನ್ಯವಾಗಿ ಮೃಗಶಿರ ನಕ್ಷತ್ರದಲ್ಲಿ ಸಾಧಾರಣ ಮಳೆ ಆಗುತ್ತದೆ. ಹವಾಮಾನ ಇಲಾಖೆ ಲೆಕ್ಕಾಚಾರಗಳ ಪ್ರಕಾರ ಇದೇ ಅವಧಿಯಲ್ಲಿ ಮಾನ್ಸೂನ್ ಶುರುವಾಗುತ್ತದೆ. ಇದೀಗ ಕೊಡಗಿನಾದ್ಯಂತ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಕಳೆದ ವಾರದ ತನಕ ಹಗಲು ಬಿಸಿಲು ರಾತ್ರಿ ಮಳೆ ಆಗುತ್ತಿತ್ತು. ಈ ವಾರದಿಂದ ಬೆಳಗ್ಗೆಯೇ ಮೋಡ ಮತ್ತು ತುಂತುರು ಮಳೆ ಮಧ್ಯಾಹ್ನ ನಂತರ ಸಾಧಾರಣ ಮಳೆ ಬರುತ್ತಿದೆ. ಭತ್ತ ಕೃಷಿ ಕಾರ್ಯಕ್ಕೆ ಸಿದ್ಧತೆ ನಡೆಸಲು ಇದು ಪೂರಕವಾಗಿದ್ದು, ರೈತರು ಉತ್ಸಾಹದಿಂದ ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ.
ಬುಧವಾರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨೩.೧೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೫.೬೨ ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೪೬೬.೭೦ ಮಿ.ಮೀ. ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ೧೯೨.೪೨ ಮಿ.ಮೀ. ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಲ್ಲಿಯ ತನಕ ೬೬೫.೬೪ ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ ೪೧೨.೮೫ ಮಿ.ಮೀ., ಪೊನ್ನಂಪೇಟೆ ತಾಲೂಕಿನಲ್ಲಿ ೪೩೭.೪೧ ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ ೩೮೧.೩೮ ಮಿ.ಮೀ. ಹಾಗೂ ಕುಶಾಲನಗರ ತಾಲೂಕಿನಲ್ಲಿ ೪೩೬.೨೦ ಮಿ.ಮೀ. ಮಳೆಯಾಗಿದೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಕುಶಾಲನಗರ ತಾಲೂಕಿನ ಹಾರಂಗಿ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ನಿಧಾನಕ್ಕೆ ಏರಿಕೆ ಆಗುತ್ತಿದೆ. ಬುಧವಾರದ ಮಾಹಿತಿ ಪ್ರಕಾರ ೫೩೨ ಕ್ಯೂಸೆಕ್ ನೀರಿನ ಒಳಹರಿವು ಇದೆ. ಕಳೆದ ವರ್ಷ ಇದೇ ದಿನ ೧೧೫ ಕ್ಯೂಸೆಕ್ ಮಾತ್ರ ನೀರು ಜಲಾಶಯಕ್ಕೆ ಬರುತ್ತಿತ್ತು. ೨೮೫೯ ಅಡಿ ಎತ್ತರದ ಅಣೆಕಟ್ಟೆಯಲ್ಲಿ ಪ್ರಸ್ತುತ ೨೮೨೬.೨೮ ಅಡಿಗಳಷ್ಟು ನೀರಿದೆ. ಕಳೆದ ವರ್ಷ ಇದೇ ದಿನ ೨೮೧೮.೮೮ ಅಡಿಗಳಷ್ಟು ನೀರು ಇತ್ತು. ೮.೫ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ ೨.೩೯೮ ಟಿಎಂಸಿಗಳಷ್ಟು ಬಳಕೆಯೋಗ್ಯ ನೀರಿದೆ. ಕಳೆದ ವರ್ಷ ಈ ಪ್ರಮಾಣ ೧.೮೧೮ ಟಿಎಂಸಿಗಳಷ್ಟಿತ್ತು. ಈಗ ನದಿಗೆ ಮಾತ್ರ ೨೦೦ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ನದಿಗೆ ೫೦, ಕಾಲುವೆಗೆ ೩೯ ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು.
ಈ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇರುವುದರಿಂದ ಮಳೆಯಾಶ್ರಿತ ಮತ್ತು ನೀರಾವರಿ ಆಶ್ರಿತ ಪ್ರದೇಶಗಳಲ್ಲಿ ಭತ್ತದ ಬೇಸಾಯಕ್ಕೆ ರೈತರು ಭರದ ಸಿದ್ಧತೆ ನಡೆಸಿದ್ದಾರೆ. ಕೃಷಿ ಇಲಾಖೆಯೂ ರೈತರಿಗೆ ಪೂರಕವಾಗಿ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಮಡಿಕೇರಿ ತಾಲೂಕಿನಲ್ಲಿ ಈ ವರ್ಷ ೬ ಸಾವಿರ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಆದರೆ ಬರದ ಕಾರಣ ಕಳೆದ ವರ್ಷ ೩,೦೫೦ ಹೆಕ್ಟೇರ್ ಪ್ರದೇಶದಲ್ಲಷ್ಟೇ ಬಿತ್ತನೆ ಆಗಿತ್ತು. ಕುಶಾಲನಗರ ತಾಲೂಕು ಒಳಗೊಂಡಂತೆ ಸೋಮವಾರಪೇಟೆ ತಾಲೂಕಿನ ಮಳೆಯಾಶ್ರಿತ ೭,೧೦೦ ಹೆಕ್ಟೇರ್ ಪ್ರದೇಶ ಮತ್ತು ೨,೪೦೦ ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಯಾಗಿದೆ. ಕಳೆದ ಮುಂಗಾರಿನಲ್ಲಿ ಇಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ೨,೪೦೦ ಹೆಕ್ಟೇರ್ ಮತ್ತು ನೀರಾವರಿ ಪ್ರದೇಶದಲ್ಲಿ ೨,೧೫೦ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿತ್ತು. ಪೊನ್ನಂಪೇಟೆ ತಾಲೂಕು ಒಳಗೊಂಡಂತೆ ವಿರಾಜಪೇಟೆ ತಾಲೂಕಿನಲ್ಲಿ ಈ ವರ್ಷ ೧೩,೫೦೦ ಹೆಕ್ಟೇರ್ ಮಳೆಯಾಶ್ರಿತ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಪಡಿಸಲಾಗಿದೆ. ಈ ಭಾಗದಲ್ಲಿ ಕಳೆದ ವರ್ಷ ೮,೯೦೭ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
ಕುಶಾಲನಗರ ತಾಲೂಕು ಒಳಗೊಂಡಂತೆ ಸೋಮವಾರಪೇಟೆ ತಾಲೂಕಿನಲ್ಲಿ ಈ ಮಂಗಾರಿನಲ್ಲಿ ೩,೫೦೦ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಮತ್ತು ೭೦ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಕಳೆದ ವರ್ಷ ಇಲ್ಲಿ ೨,೯೩೬ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆದಿದ್ದರೆ, ರಾಗಿ ಬೆಳೆಯಲು ಸಾಧ್ಯವೇ ಆಗಿರಲಿಲ್ಲ. ಹಾಗಾಗಿ ಕಳೆದ ಮುಂಗಾರಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಶೇ. ೫೦.೮, ಸೋಮವಾರಪೇಟೆ ತಾಲೂಕಿನಲ್ಲಿ ಶೇ. ೭೭.೫೧ ಹಾಗೂ ವಿರಾಜಪೇಟೆ ತಾಲೂಕಿನಲ್ಲಿ ಶೇ. ೬೫.೯೮ ಸೇರಿದಂತೆ ಜಿಲ್ಲೆಯಲ್ಲಿ ಶೇ. ೬೭.೮೧೭ರಷ್ಟು ಮಾತ್ರ ಬಿತ್ತನೆಯ ಗುರಿ ಸಾಧಿಸಲಾಗಿತ್ತು.
ಜಿಲ್ಲೆಯಲ್ಲಿ ಇಲ್ಲಿಯ ತನತ ವಾಡಿಕೆಗಿಂತ ಶೇ.೧೫ ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. ೪೦ಕ್ಕೂ ಅಧಿಕ ಪ್ರಮಾಣದಲ್ಲಿ ಮಳೆ ಬಂದಿದೆ. ಈ ಬೆನ್ನಲ್ಲೇ ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ಧತೆ ನಡೆಸಿದ್ದಾರೆ. ಕೊಡಗಿನಲ್ಲಿ ಭತ್ತದ ಸಸಿಮಡಿ ಕಾರ್ಯವು ಈ ತಿಂಗಳಿನಲ್ಲಿ ಆರಂಭವಾಗಲಿದ್ದು, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕೆಲಸ ಜೂನ್ ತಿಂಗಳಿನಲ್ಲಿ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತೆ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಇತರೆ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನಿ ಇಡಲಾಗಿದೆ.
ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿಗೆ ಒಟ್ಟು ೧,೮೭೧ ಕ್ವಿಂಟಾಲ್ ಭತ್ತ ಮತ್ತು ೪೧ ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿಯನ್ನು ಕೃಷಿ ಇಲಾಖೆ ಇಟ್ಟುಕೊಂಡಿದೆ. ರೈತ ಸಂಪರ್ಕ ಕೇಂದ್ರಗಳಿಗೆ ಒಟ್ಟು ೧೦೬೭.೫ ಕ್ವಿಂಟಾಲ್ ಭತ್ತ, ೨.೪ ಕ್ವಿಂಟಾಲ್ ಮುಸುಕಿನ ಜೋಳದ ವಿವಿಧ ತಳಿಯ ಬಿತ್ತನೆ ಬೀಜಗಳು ಸರಬರಾಜಾಗಿದೆ. ೪೨೫ ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ರೈತರಿಗೆ ವಿತರಣೆ ಮಾಡಲಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ೬೪೪.೯ ಕ್ವಿಂಟಾಲ್ ಬಿತ್ತನೆ ಬೀಜದ ದಾಸ್ತಾನು ಇದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಐಆರ್ ೬೪, ತುಂಗಾ, ತನು, ಉಮಾ, ಆರ್‌ಎನ್‌ಆರ್ ೧೪೦೫೮, ಅಖಿರಾ ಸೇರಿದಂತೆ ವಿವಿಧ ತಳಿಯ ಭತ್ತ ಬೆಳೆಯಲಾಗುತ್ತದೆ. ಇದರ ಜತೆಯಲ್ಲಿ ಹೈಬ್ರಿಡ್ ತಳಿಯ ಭತ್ತವನ್ನೂ ರೈತರು ಬೆಳೆಯುತ್ತಾರೆ. ಮುಸುಕಿನ ಜೋಳ ಕೂಡ ಕೃಷಿ ಇಲಾಖೆ ಒದಗಿಸುವ ಬೀಜಗಳಲ್ಲದೆ ಖಾಸಗಿ ಸಂಸ್ಥೆಗಳ ಹೈಬ್ರಿಡ್ ತಳಿಗಳನ್ನೂ ರೈತರು ಬೆಳೆಯುತ್ತಾರೆ. ಕೃಷಿ ಇಲಾಖೆ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಕೆ ಮಾಡುತ್ತಿದೆ. ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್‌ಎಸ್‌ಪಿ ಸೇರಿದಂತೆ ರಸಗೊಬ್ಬರ ಬೇಡಿಕೆ ಪೂರೈಸಲು ಕೂಡ ಕೃಷಿ ಇಲಾಖೆ ಸಜ್ಜಾಗಿದೆ.
ರೈತರು ಮುಂಗಾರು ಹಂಗಾಮಿನ ಪೂರ್ವ ಸಿದ್ದತೆಯಲ್ಲಿದ್ದು, ಜಿಲ್ಲೆಯಲ್ಲಿ ಭತ್ತದ ಸಸಿಮಡಿ ಕಾರ್ಯವು ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ನಾಟಿ ಕಾರ್ಯ ಕೈಗೊಳ್ಳಲಾಗುತ್ತದೆ. ಮುಸುಕಿನ ಜೋಳದ ಬಿತ್ತನೆ ಕಾರ್ಯ ಜೂನ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಹಾಗಾಗಿ ರೈತರಿಗೆ ಅನುಕೂಲವಾಗುವಂತೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಇತರೆ ಕೃಷಿ ಪರಿಕರಗಳನ್ನು ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಲ್ಲಿ ದಾಸ್ತಾನೀಕರಿಸಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಒಟ್ಟು ೧೮೭೧ ಕ್ವಿಂಟಾಲ್ ಭತ್ತ ಮತ್ತು ೪೧ ಕ್ವಿಂಟಾಲ್ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡುವ ಗುರಿ ಹೊಂದಲಾಗಿದೆ.
ಸೋಮಸುಂದರ, ಕೃಷಿ ಇಲಾಖೆ ಜಂಟಿ ನಿರ್ದೇಶಕ
ಭಾರತೀಯ ಹಮಾಮಾನ ಇಲಾಖೆ ಮಾಹಿತಿ ಪ್ರಕಾರ ಕೊಡಗಿನಲ್ಲಿ ಜೂ.೧೨ರಿಂದ ಜೂ. ೧೬ರ ತನಕ ಮೋಡ ಕವಿದ ವಾತಾವರಣವಿದ್ದು, ತುಂತುರುವಿನಿಂದ ಸಾಧಾರಣ ಮಳೆ ಬರುವ ಸಂಭವವವಿದೆ. ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಗರಿಷ್ಠ ಉಷ್ಣಾಂಶ ೨೬-೨೯ ಡಿಗ್ರಿ ಸೆಲ್ಸಿಯಸ್ ಇರಲಿದೆ. ಕನಿಷ್ಠ ಉಷ್ಣಾಂಶ ೧೭.೭-೧೮ ಡಿ. ಸೆಲ್ಸಿಯಸ್ ಇರಲಿದೆ. ಈಗಿನ ಪ್ರಕಾರ ಜೂನ್ ೧೩ರಿಂದ ರಾಜ್ಯದಾದ್ಯಂತ ಮುಂಗಾರು ದುರ್ಬಲಗೊಳ್ಳುವ ಮುನ್ಸೂಚನೆ ಇದ್ದು, ಜೂನ್ ೧೭ರಿಂದ ಸ್ವಲ್ಪ ಮಟ್ಟಿಗೆ ಚುರುಕಾಗುವ ಲಕ್ಷಣಗಳಿವೆ.
ಡಾ. ಸುಮಂತ್ ಕುಮಾರ್, ಸಹಸಂಶೋಧಕರು, ಕೃಷಿ ಹವಾಮಾನ ಕ್ಷೇತ್ರ ವಿಭಾಗ, ನಾಗನಹಳ್ಳಿ