ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಚುರುಕು: ಮಲೆನಾಡು, ದಕ್ಷಿಣ ಕರ್ನಾಟಕದಲ್ಲೂ ಮಳೆ ಬಿರುಸು

rain (1)
Published on

ಬೆಂಗಳೂರು: ಮಾನ್ಸೂನ್ ಚುರುಕಾಗಿರುವ ಪರಿಣಾಮ ಕರಾವಳಿ, ಮಲೆನಾಡು ಮತ್ತು ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಆಯ್ದ ಜಿಲ್ಲೆಗಳಲ್ಲಿ ಶನಿವಾರವೂ ಧಾರಾಕಾರವಾಗಿ ವರ್ಷಧಾರೆಯಾಗಿದೆ.

ಕಳೆದ 24 ಗಂಟೆ ಅವಧಿಯಲ್ಲಿ ಉತ್ತರ ಕನ್ನಡದ ಶಿರಾಲಿ ವೀಕ್ಷಣಾಲಯ 12, ಕುಮಟಾ 11, ಮಂಕಿ 10 ಗೇರ್ಸೊಪ್ಪ 10, ರಾಯಚೂರಿನ ಕುರ್ಡಿ 9, ಕಲಬುರಗಿಯ ಚಿಂಚೋಳಿ 8, ಗದಗದ ಗದಗ ವೀಕ್ಷಣಾಲಯ 8, ದಕ್ಷಿಣ ಕನ್ನಡದ ಮಂಗಳೂರು ವಿಮಾನ ನಿಲ್ದಾಣ ವೀಕ್ಷಣಾಲಯ 8, ವಿಜಯಪುರದ ವಿಜಯಪುರ ಅರೆಕಾಲಿಕ ವೀಕ್ಷಣಾಲಯ 8 ಮತ್ತು ಶಿವಮೊಗ್ಗದ ಆಗುಂಬೆಯಲ್ಲಿ 7 ಸೆಂಮೀ ಮಳೆ ಸುರಿದಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಜು.20ರಿಂದ ಮುಂದಿನ 2 ದಿನ ಅತಿ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 20 ಸೆಂಮೀವರೆಗೆ ಮಳೆಯಾಗಬಹುದು. ಅಲ್ಲದೆ, ಈ ಜಿಲ್ಲೆಗಳಲ್ಲಿ ಜು.22ರಿಂದ ಜು.26ರವರೆಗೆ ಆರೆಂಜ್ ಅಲರ್ಟ್ ಸಹ ಕೊಡಲಾಗಿದೆ. ಕರಾವಳಿಯ ಕೆಲ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆ ಜೊತೆಗೆ ಗಾಳಿ ವೇಗವೂ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಚಿಕ್ಕಮಗಳೂರು. ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜು.20ರಿಂದ ಜು.26ರವರೆಗೆ ಬಿರುಸಾಗಿ ವರ್ಷಧಾರೆಯಾಗುವ ಕಾರಣ ಆರೆಂಜ್ ಅಲರ್ಟ್ ಕೊಡಲಾಗಿದೆ. ಧಾರವಾಡ, ಗದಗ, ಹಾವೇರಿ,ಚಾಮರಾಜನಗರ, ಮಂಡ್ಯ, ಮೈಸೂರಿನಲ್ಲಿ ಮುಂದಿನ 2 ದಿನ ಹಾಗೂ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲಿ ಜು.21ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ವರ್ಷಧಾರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net