

ದೇವದುರ್ಗ: ನಾರಾಯಣಪುರ ಬಲದಂಡೆ ನಾಲೆಗೆ ಇದೇ ಮೊದಲ ಬಾರಿಗೆ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಸಭೆ (ಐಸಿಸಿ) ನಡೆಸದೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ವಾರಬಂದಿ ಪದ್ಧತಿಯಂತೆ ನೀರು ಬಿಡಲು ತೀರ್ಮಾನಿಸಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ನಾರಾಯಣಪುರ ಬಲ ಹಾಗೂ ಎಡದಂಡೆ ನಾಲೆಗೆ ನೀರು ಹರಿಸಲು ಜನಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸೂಚನೆ ಮೇರೆಗೆ ಅಧಿಕಾರಿಗಳು ತೀರ್ಮಾನ ಕೈಗೊಂಡಿದ್ದಾರೆ. ಮೊದಲ ಬೆಳೆಗೆ 120 ದಿನ ನೀರು ಹರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ವಾರಬಂದಿ ಅನುಸರಿಸುತ್ತಿರುವುದರಿಂದ ಕೃಷಿಗೆ ವಾಸ್ತವದಲ್ಲಿ 80 ದಿನ ನೀರು ಸಿಗಲಿದೆ. ಮುಂಗಾರು ಹಂಗಾಮಿನಲ್ಲಿ ವಾರಬಂದಿ ಹಾಕುತ್ತಿರುವುದು ಬಹುತೇಕ ಇದೇ ಮೊದಲಾಗಿದೆ. ಕೃಷ್ಣಾ ನದಿ ತುಂಬಿ ಹರಿದರೂ ವಾರಬಂದಿ ಯಾಕೆಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ.
ಬಲದಂಡೆ ನಾಲೆ ವ್ಯಾಪ್ತಿಗೆ ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲೂಕು ಒಳಪಡುತ್ತಿದ್ದು, ರೈತರು ಭತ್ತ ಸೇರಿ ವಿವಿಧ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಜು.27ರಿಂದ ನೀರು ಬಿಡುವ ಆದೇಶವಿದ್ದರೂ ಇನ್ನೂ ನಾಲೆಗೆ ನೀರು ಹರಿಸಿಲ್ಲ. ತಾಲೂಕಿನ ರೈತರು ಹೊಲ ಹದ ಮಾಡಿಕೊಂಡಿದ್ದು ನಾಲೆ ನೀರಿಗಾಗಿ ಕಾಯುತ್ತಿದ್ದಾರೆ.
ನ.23ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ವಾರಬಂದಿಯಂತೆ ನಾಲೆಗೆ 14 ದಿನ ನೀರು ಹರಿಸಿದರೆ 8 ಸ್ಥಗಿತಗೊಳಿಸಲಾಗುತ್ತದೆ. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಇರುವವರೆಗೆ ವಾರಬಂದಿ ಜಾರಿ ಮಾಡಲ್ಲ ಎಂದು ಅಧಿಕಾರಿಗಳು ಮೌಖಿಕವಾಗಿ ಹೇಳುತ್ತಿದ್ದಾರೆ. ಆದರೆ, ಮುಂಗಾರು ಹಂಗಾಮಿನಲ್ಲಿ ಇಷ್ಟು ವರ್ಷ ಇಲ್ಲದ ವಾರಬಂದಿ ಈಗ ಯಾಕೆ ಎಂಬುದು ರೈತರ ಪ್ರಶ್ನೆಯಾಗಿದೆ.
ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಮೆಣಸಿನಕಾಯಿ, ಹತ್ತಿ ಬೆಳೆಯಲಾಗುತ್ತದೆ. ವಾರಬಂದಿ ಅನುಸರಿಸಿದರೆ ನಾಲೆ ಕೊನೇ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಸಿಗುವುದು ಅನುಮಾನವಾಗಿದೆ.