ಮುಂಗಾರು ಆಶಾದಾಯಕ: ಉತ್ತಮ ವರ್ಷಧಾರೆ

rain
Transparent umbrella under heavy rain against water drops splash background. Rainy weather concept.
Published on

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ಮುಂಗಾರು ಆಶಾದಾಯಕವಾಗಿದ್ದು, ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ತುಸು ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಈಗಾಗಲೇ ಭವಿಷ್ಯ ಹೇಳಿದೆ.

ಫೆಸಿಫಿಕ್​ ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿಗ್ರಿ ಸೆಲ್ಸಿಯಸ್​ನಿಂದ 1.5 ಡಿಗ್ರಿ ಸೆಲ್ಸಿಯಸ್​ವರೆಗೆ ಹೆಚ್ಚು ದಾಖಲಾದರೆ "ಎಲ್​ ನಿನೋ' ಉಂಟಾಗುತ್ತದೆ. ಫೆಸಿಫಿಕ್​ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ "ಲಾ-ನಿನಾ' ಎಂದು ಕರೆಯಲಾಗುತ್ತಿದೆ. ಎಲ್​ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮಳೆ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಎಲ್​ ನಿನೋ ಪ್ರಭಾವದಿಂದಾಗಿ ಮುಂಗಾರಿನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು. ಇದರಿಂದಾಗಿ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು. ಜಾಗತಿಕ ನಿಯಂತ್ರಕ ಸೂಚ್ಯಂಕ ಪ್ರಕಾರ ಕಳೆದ ಫೆಬ್ರವರಿಯಿಂದ ದುರ್ಬಲಗೊಂಡು ಮಧ್ಯಮ ಹಂತಕ್ಕೆ ಬಂದಿರುವ "ಎಲ್​ ನಿನೋ' ಜೂನ್​ ಅಥವಾ ಜುಲೈನಲ್ಲಿ ಶೂನ್ಯ ಹಂತಕ್ಕೆ ಬರಲಿದೆ. ನಂತರ, "ಲಾ-ನಿನಾ' ಬರಲಿದೆ. ಇದರಿಂದಾಗಿ ಈ ಬಾರಿ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇದೆ.

ವಾಡಿಕೆಯಂತೆ ಮೇ 19ಕ್ಕೆ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ನೈಋತ್ಯ ಮಾನ್ಸೂನ್​( ಮುಂಗಾರು ಮಳೆ) ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಮಾರುತಗಳು ಪ್ರಬಲವಾದರೆ ತಿಂಗಳಾಂತ್ಯಕ್ಕೆ ಕೇರಳಕ್ಕೆ ಪ್ರವೇಶಿಸಲಿವೆ. ಕೇರಳಕ್ಕೆ ಬಂದಿರುವ ಮಾರುತಗಳು ಪ್ರಬಲವಾದರೆ ಅದೇ ದಿನ ಅಥವಾ ಒಂದೆರೆಡು ದಿನದಲ್ಲಿ ಕರ್ನಾಟಕಕ್ಕೆ ಆಗಮಿಸಲಿದೆ ಎಂದು ಹವಾಮಾನ ತಜ್ಞ ಡಾ. ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net