ಮುಂಗಾರು ಫಸಲಿಗೆ ತೇವಾಂಶ ಕೊರತೆ

ald 6
ಅಳವಂಡಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಲ್ಲದೆ ಬಾಡಿದ ಮೆಕ್ಕೆಜೋಳ.
Published on

ಅಳವಂಡಿ: ಹೋಬಳಿ ವ್ಯಾಪ್ತಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೊಂಡ ಮೆಕ್ಕೆಜೋಳ, ಶೇಂಗಾ, ಸಜ್ಜೆ, ತೊಗರಿ, ಸೂರ್ಯಕಾಂತಿ ಬೆಳೆಗಳು ತೇವಾಂಶ ಕೊರತೆಯಿಂದ ಒಣಗಲಾರಂಭಿಸಿವೆ.ರೈತರಲ್ಲಿ ಬೆಳೆ ನಾಶವಾಗುವ ಭೀತಿ ಆವರಿಸಿದೆ.

ರೈತರು ಪ್ರತಿ ಎಕರೆಗೆ ಉಳುಮೆ, ಬಿತ್ತನೆ ಬೀಜ, ರಸಗೊಬ್ಬರ, ಕಳೆ ನಿರ್ವಹಣೆ ಇನ್ನಿತರ ಖರ್ಚು ಸೇರಿ ಸಾವಿರಾರು ರೂ. ವ್ಯಯ ಮಾಡಿದ್ದು, ಮಳೆ ಇಲ್ಲದೆ ಬೆಳೆ ಬಾಡುವ ಹಂತ ತಲುಪಿವೆ.

ಪ್ರಾರಂಭದಲ್ಲಿ ಒಂದೆರಡು ಮಳೆಯಾಗಿದ್ದರಿಂದ ಖುಷಿ ಭೂಮಿಯಲ್ಲಿ ರೈತರು ಬಿತ್ತನೆ ಮಾಡಿದ್ದು, ನಂತರ ಮಳೆಯಾಗಿಲ್ಲ. ಕೆಲ ದಿನದ ಹಿಂದೆ ಸುರಿದ ಜಿಟಿಜಿಟಿ ಮಳೆಗೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದ ಬೆಳೆಗಳು, ಇದೀಗ ಬಾಡಲಾರಂಭಿಸಿವೆ.

ಎಲ್ಲೆಲ್ಲಿ ಮಳೆ ಕೊರತೆ: ಅಳವಂಡಿ, ಕವಲೂರು, ಬೆಟಗೇರಿ, ಮುರ್ಲಾಪುರ, ಘಟ್ಟಿರಡ್ಡಿಹಾಳ, ಕಂಪ್ಲಿ, ಗುಡಗೇರಿ, ರಘುನಾಥನಹಳ್ಳಿ, ಹಟ್ಟಿ, ಹೈದರನಗರ, ಹಲವಾಗಲಿ, ಬೆಳಗಟ್ಟಿ, ಮೋರನಾಳ ಗ್ರಾಮಗಳಲ್ಲಿ ಮಳೆಯಾಗದೆ ಬೆಳೆ ಸಂಪೂರ್ಣ ಒಣಗಲಾರಂಭಿಸಿವೆ.

ಅಳವಂಡಿ ವಲಯದ 10 ಗ್ರಾಪಂ ವ್ಯಾಪ್ತಿ 37 ಗ್ರಾಮಗಳು ಬರುತ್ತವೆ. ಒಟ್ಟು ಭೌಗೋಳಿಕ ಕ್ಷೇತ್ರ 1,21,577.5 ಎಕರೆ ಇದೆ. ಇದರಲ್ಲಿ ಸಾಗುವಳಿಗೆ ಯೋಗ್ಯವಲ್ಲದ 17,345 ಎಕರೆ ಇದೆ.

ಸಾಗುವಳಿ ಯೋಗ್ಯ 1,04,233 ಎಕರೆಯಲ್ಲಿ ಮುಂಗಾರು ಹಂಗಾಮಿನ ಬೆಳೆ ಕ್ಷೇತ್ರ 51,313.17 ಎಕರೆ. ಹಿರೆಸಿಂದೋಗಿ, ಕೋಳೂರು, ಕಾಟ್ರಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕಳೆದ ಎರಡು ದಿನದಿಂದ ಮಳೆಯಾಗಿದ್ದು ಬೆಳೆಗಳಿಗೆ ಅನೂಕೂಲವಾಗಿದೆ.

ಪ್ರಸಕ್ತ ವರ್ಷ ರೈತ ಸಂಪರ್ಕ ಕೇಂದ್ರದಿಂದ ಇಲ್ಲಿಯವರೆಗೆ ಭತ್ತ 6.25 ಕ್ವಿಟಾಲ್, ಹೆಸರು 60 ಕೇಜಿ, ತೊಗರಿ 16.98 ಕ್ವಿ, ಸೂರ್ಯಕಾಂತಿ 1.98 ಕ್ವಿ, ಸಜ್ಜೆ 2,23 ಕ್ವಿ, ಮೆಕ್ಕೆಜೋಳ 594.00 ಕ್ವಿಟಾಲ್ ಮಾರಾಟವಾಗಿದೆ.

ಕಳೆದ ವರ್ಷ ಹೆಸರು 05.75 ಕ್ವಿ, ತೊಗರಿ 9.60 ಕ್ವಿ, ಸೂರ್ಯಕಾಂತಿ 27.02 ಕ್ವಿ, ಸಜ್ಜೆ 04.34 ಕ್ವಿ, ಮೆಕ್ಕೆಜೋಳ 592.00 ಕ್ವಿಟಾಲ್ ಮಾರಾಟ ಆಗಿತ್ತು. ಪ್ರಸಕ್ತ ವರ್ಷ ಸೂರ್ಯಕಾಂತಿ, ಸಜ್ಜೆ, ಹೆಸರು ಕಡಿಮೆ, ಮಕ್ಕೆಜೋಳ, ತೊಗರಿ ಬಿತ್ತನೆ ಜಾಸ್ತಿ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net