ಜೂ 2ರಂದು ರಾಜ್ಯಕ್ಕೆ ಮುಂಗಾರು:ಹವಾಮಾನ ಇಲಾಖೆ ಮಾಹಿತಿ

Mansoon
Published on

ಬೆಂಗಳೂರು: ವಾಡಿಕೆಗಿಂತ ಮುನ್ನವೇ ಗುರುವಾರ ಕೇರಳಕ್ಕೆ ಪ್ರವೇಶಿಸಿರುವ ನೈಋತ್ಯ ಮಾನ್ಸೂನ್​( ಮುಂಗಾರು ಮಳೆ) ಜೂ 2ರಂದು ಕರ್ನಾಟಕದ ಕರಾವಳಿ ಭಾಗಕ್ಕೆ ಆಗಮಿಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜೂ 7ರ ವೇಳೆಗೆ ರಾಜ್ಯಾದ್ಯಂತ ಮಾರುತಗಳು ಆವರಿಸಲಿವೆ. ಜೂ 2ರಿಂದ ಮಳೆ ಚುರುಕು ಪಡೆಯಲಿದೆ. 2ರಿಂದ 7 ವರ್ಷಕ್ಕೊಮ್ಮೆ ಬರುವ "ಎಲ್​ ನಿನೋ' ಮುಂಗಾರಿನ ಮೇಲೆ ಪರಿಣಾಮ ಬೀರುತ್ತದೆ. ಕಳೆದ ವರ್ಷ ಸೃಷ್ಟಿಯಾಗಿದ್ದ "ಎಲ್​ ನಿನೋ'ದಿಂದ ಮುಂಗಾರಿನ ಮೇಲೆ ಪರಿಣಾಮ ಬೀರಿತ್ತು. ಹೀಗಾಗಿ, ರಾಜ್ಯದಲ್ಲಿ ಮಳೆ ಕೊರತೆಯಾಗಿತ್ತು. ಈಗಾಗಲೇ ದುರ್ಬಲಗೊಂಡಿರುವ ಇದು ಶೂನ್ಯ ಹಂತಕ್ಕೆ ಬಂದಿದೆ. ಜುಲೈ ಮೊದಲ ವಾರದಲ್ಲಿ ಲಾ-ನಿನಾ' ಉಂಟಾಗಲಿದೆ. ಇದರಿಂದಾಗಿ ರಾಜ್ಯದಲ್ಲಿ ಮುಂಗಾರು ಆಶಾದಾಯಕವಾಗಿದೆ.ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಜೂನ್​ನಲ್ಲಿ ವಾಡಿಕೆಯಷ್ಟೇ ಮಳೆ ಸುರಿಯಲಿದೆ. ಜುಲೈನಿಂದ ಅಧಿಕವಾಗಿ ಸುರಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಇಲಾಖೆ ನಿರ್ದೇಶಕ ಸಿ.ಎಸ್​.ಪಾಟೀಲ್​ ಗುರುವಾರ ಮಾಹಿತಿ ನೀಡಿದರು.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮೇ 19ರಿಂದ ಮಾನ್ಸೂನ್​ ಆರಂಭವಾಯಿತು. ಪೂರಕ ವಾತಾವರಣ ಇರುವುದು,ಮಾರುತಗಳು ಪ್ರಬಲವಾಗಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ವ್ಯಾಪಿರುವ ಮಾನ್ಸೂನ್​ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಿದೆ. ಆ ಭಾಗದಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಪ್ರವಾಹದಂತ ಪರಿಸ್ಥಿತಿ ಉಂಟಾಗುತ್ತಿದೆ. ಉತ್ತಮ ವರ್ಷಧಾರೆಯಿಂದ ರಾಜ್ಯದಲ್ಲಿ ಕೃಷಿ ಚಟುವಟಿಕೆಗಳ ನಡೆಸಲು ಬಹಳ ಅನುಕೂಲವಾಗಲಿದೆ ಎಂದು ಸಿ.ಎಸ್​.ಪಾಟೀಲ್​ ಮಾಹಿತಿ ನೀಡಿದರು.

5 ಜಿಲ್ಲೆಗಳಿಗೆ ಯೆಲ್ಲೋ ಅರ್ಲಟ್​

ಬೆಂಗಳೂರು, ಬೆಂ.ಗ್ರಾಮಾಂತರ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಜೂ 2ರಂದು ಹಾಗೂ ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರಿನಲ್ಲಿ ಜೂ 3ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ. ಉಡುಪಿ, ದಣ ಕನ್ನಡ, ಉತ್ತರ ಕನ್ನಡ ಸೇರಿ ಉಳಿದ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net