

ವಿಜಯಪುರ: ಮೊಹರಂ ಭಾವೈಕ್ಯತೆಯ ಹಬ್ಬ. ಮೊಹರಂ ಆಚರಣೆಯಲ್ಲಿ ಮುಸ್ಲಿಮೇತರರೆ ಹೆಚ್ಚಾಗಿ ಭಾಗವಹಿಸಿ ಹರಕೆ ಹೊತ್ತಿರುತ್ತಾರೆಂದು ಆಲಗೂರ- ಜಮಖಂಡಿ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾದೇವ ಶಿವಾಚಾರ್ಯರು ತಿಳಿಸಿದರು.
ಬಬಲೇಶ್ವರ ತಾಲೂಕಿನ ತಿಗಣಿಬಿದರಿ ಗ್ರಾಮದಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಗೆಳೆಯರ ಬಳಗ ಸಾಂಸ್ಕೃತಿಕ ವೇದಿಕೆ ತಿಗಣಿಬಿದರಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬಬಲೇಶ್ವರದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ಮುಂಗಾರು ಜಾನಪದ ಸಾಂಸ್ಕೃತಿಕ ಉತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಷ್ಟಾರ್ಥಗಳ ಈಡೇರಿಕೆಗಾಗಿ ಅನೇಕರು ಲಾಲಸಾಬ ದೇವರಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಹುಲಿ ವೇಷ, ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಇಂತ ಆಚರಣೆಯಲ್ಲಿ ಯುವಕರು ಭಾವೈಕ್ಯತೆಯಿಂದ ಹಬ್ಬಗಳಲ್ಲಿ ತೊಡಗಿಸಿಕಂಡು ಮಾದರಿಯಾಗಬೇಕು ಎಂದರು.
ಉದ್ಘಾಟನೆ ನೆರವೇರಿಸಿದ ಬಿಎಲ್‌ಡಿಈ ಸಂಸ್ಥೆಯ ನಿರ್ದೇಶಕ ಬಸವನಗೌಡ ಎಂ.ಪಾಟೀಲ ಮಾತನಾಡಿ, ನಮ್ಮ ಕುಟುಂಬವು ಲಾಲಸಾಹೇಬರ ಆಶೀರ್ವಾದದಿಂದ ಸುಖ ಸಮೃದ್ಧಿ ಹೊಂದಿದೆ. ನಾಡಿನ ರೈತರಿಗೆ ಹಸನ್ ಹುಸೇನರ ಕೃಪೆಯಿರಲಿ. ದೇವರು ಸಕಾಲಕ್ಕೆ ಮಳೆ ಬೆಳೆ ನೀಡಲಿ. ದೇಶದಲ್ಲಿ ಮೊಹರಂ ಸರ್ವಧರ್ಮಿಯರು ಆಚರಿಸುವ ಏಕೈಕ ಹಬ್ಬವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಹಜರತ್ ಹಸನ್, ಹುಸೇನ ಸಹೋದರರ ಪುಣ್ಯ ಸ್ಮರಣೆಯ ಈ ಹಬ್ಬದಲ್ಲಿ ಜಾತಿ ಮತ ಪಂಥ ಭಾಷೆ ಲಿಂಗ ಎನ್ನದೇ ಎಲ್ಲ ಧರ್ಮದ ಜನರು ಪಾಲ್ಗೊಳ್ಳಬೇಕೆಂದರು.
ಮುಖಂಡರಾದ ಚನ್ನಪ್ಪ ಕೊಪ್ಪದ, ಮಹೇಶ ಮಾಳಿ, ಅಪ್ಪಾಸಾಹೇಬ ಹುಬ್ಬಳ್ಳಿ, ಅರ್ಜುನ ದೇವಕ್ಕಿ, ಮೋಸಿಂಪೀರ ಮುಜಾವರ, ಲಾಲಸಾಬ ಕಮತೆ, ಮಹಮ್ಮದಗೌಸ ಹವಾಲ್ದಾರ್, ರಾಜೇಸಾಬ ಶಿವನಗುತ್ತಿ, ಅಕ್ಷಯ ಕುಲಕರ್ಣಿ, ಆನಂದ ಮೋಕಾಶಿ, ಖಾಜಾಪಟೇಲ ಪಾಟೀಲ, ಮಹಾದೇವ ಹರಿಜನ, ರಾಜುಗೌಡ ಬಿರಾದಾರ, ಮಕಬುಲ್ ಖೇಜಿ, ಮಮತಾಜಅಲಿ ದಳವಾಯಿ, ಅಲ್ಲಾಬಕ್ಷ ಡಪಳಾಪುರ, ಆನಂದ ಬಿರಾದಾರ, ಜ್ಯೋತಿಬಾ ಪವಾರ, ಚಿದಾನಂದ ಬಿರಾದಾರ, ನಿಂಗನಗೌಡ ಬಿರಾದಾರ, ಪೈಗಂಬರ ಪಟೇಲ, ವಜೀರ ಆಲಗೂರ, ಚಂದ್ರಶೇಖರ ಮಾಳಿ, ಚಂದ್ರಶೇಖರ ಚಲುವಾದಿ, ಶಾಂತಪ್ಪ ಕೊಕಟನೂರ ಮತ್ತಿತರರಿದ್ದರು.
ಹುಬ್ಬಳ್ಳಿಯ ಪ್ರಣೀತಿ ರಾವ ಜಾನಪದ ಸಂಗೀತ, ದಿಕ್ಷಾ ಬೀಸೆ ತಂಡದಿಂದ ಜಾನಪದ ನೃತ್ಯ, ಸೂಪಿಯಾ ಬಿಜಾಪುರ ಇವರಿಂದ ಕನ್ನಡ ಗೀತೆಗಳ ಗಾಯನ ಹಾಗೂ ಗೋಪಾಲ ಇಂಚಗೇರಿ, ಗೋಪಾಲ ಹೂಗಾರ ಇವರಿಂದ ನಗೆಹಬ್ಬ ಕಾರ್ಯಕ್ರಮ ನಡೆಯಿತು.