

ಬೆಂಗಳೂರು:ರಾಜ್ಯದಲ್ಲಿ ಇನ್ನೂ 2 ವಾರ ಮುಂಗಾರು ಮುಂದುವರಿಯುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಗುಜರಾತ್ ಹಾಗೂ ಓರಿಸ್ಸಾ ಕರಾವಳಿಯ ಸಮುದ್ರ ತೀರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 5 ದಿನ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಬೆಂ.ದಕ್ಷಿಣ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಬೆಳಗಾವಿ, ವಿಜಯಪುರ ಸೇರಿ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಅ.5ರಿಂದ ಅ.11ರವರೆಗೆ ಮಳೆಯಾಗಲಿದೆ. ಈ ಅವಧಿಯಲ್ಲಿ ಕೆಲವೆಡೆ ಮಳೆಗಿಂತ ಬಿರುಗಾಳಿ ಜಾಸ್ತಿ ಇರಲಿದೆ ಎಂದು ಇಲಾಖೆ ಮಾಹಿತಿ ಕೊಟ್ಟಿದೆ.
ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ ಮಾತನಾಡಿ, ಭಾರತೀಯ ಹವಾಮಾನ ಇಲಾಖೆ ಪ್ರಕಾರ ಜೂ.1ರಿಂದ ಸೆ.30ವರೆಗಿನ ಅವಧಿಯನ್ನು ಮುಂಗಾರು (ನೈಋತ್ಯ ಮಾನ್ಸೂನ್) ಎಂದು ಪರಿಗಣಿಸಲಾಗುತ್ತಿದೆ. ಇಂತಹ ದಿನದಲ್ಲೇ ಮುಂಗಾರು ಕೊನೆಯಾಗಲಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ ಎಂದರು.
ಮುಂಗಾರು ಸಂಬಂಧಿಸಿದ ಮಾರುತಗಳು ಮಧ್ಯಪ್ರದೇಶದಲ್ಲಿ ಸಕ್ರಿಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳಗಳಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಶುರುವಾದ ಸ್ಥಳದಲ್ಲಿಯೇ ವಾಪಸ್ ಮಾರುತಗಳು ಆಗಮಿಸಿದರೆ ಅದನ್ನು ಮುಂಗಾರು ಮುಕ್ತಾಯ ಎಂದು ಘೋಷಿಸಲಾಗುತ್ತದೆ. ಪ್ರಸ್ತುತ ಗುಜರಾತ್, ಓರಿಸ್ಸಾ ಕರಾವಳಿಯ ಸಮುದ್ರ ತೀರದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಮುಂದಿನ 2 ವಾರ ಮಳೆಯಾಗಲಿದೆ. ಮುಂಗಾರು ಮುಗಿದ ಬಳಿಕ ಈಶಾನ್ಯ ಮಾನ್ಸೂನ್ ಸಕ್ರಿಯಗೊಳ್ಳಲಿದೆ ಎಂದು ಹೇಳಿದರು.