ರಾಜ್ಯಕ್ಕೆ ಮುಂಗಾರು ಪ್ರವೇಶ:ನಾಳೆ 15 ಜಿಲ್ಲೆಗಳಿಗೆ ಯೆಲ್ಲೋ ಎಚ್ಚರಿಕೆ

rain
Published on

ಬೆಂಗಳೂರು:ವಾಡಿಕೆಯಂತೆ ರಾಜ್ಯಕ್ಕೆ ನೈಋತ್ಯ ಮಾನ್ಸೂನ್​ ಭಾನುವಾರ ಅಧಿಕೃತವಾಗಿ ಪ್ರವೇಶಿಸಿದೆ. ವಾಡಿಕೆಗಿಂತ ಮುನ್ನ ಕೇರಳಕ್ಕೆ ಕಾಲಿಟ್ಟಿದ್ದ ಮುಂಗಾರು,3 ದಿನ ಬಳಿಕ ರಾಜ್ಯದ ಕರಾವಳಿ ಭಾಗಕ್ಕೆ ಆಗಮಿಸಿದ ಮಾನ್ಸೂನ್​, ಚಿತ್ರದುರ್ಗವರೆಗೆ ಆವರಿಸಿದೆ.ಜೂ 10ರೊಳಗೆ ರಾಜ್ಯಾದ್ಯಂತ ವ್ಯಾಪಿಸುವ ಸಾಧ್ಯತೆ ಇದೆ.ಮಾನ್ಸನ್​ ಪ್ರವೇಶಿಸಿದ ಬೆನ್ನಲ್ಲೇ ಬೆಂಗಳೂರು, ಬೆಂ.ಗ್ರಾಮಾಂತರ, ಮಂಡ್ಯ, ರಾಮನಗರ, ಹಾಸನ, ಮೈಸೂರು ಸೇರಿ ರಾಜ್ಯದ ಹಲವೆಡೆ ಭರ್ಜರಿ ವರ್ಷಧಾರೆಯಾಗಿದ್ದು, ಕೃಷಿ ಚಟುವಟಿಕೆಗಳು ಬಿರುಸಾಗಿದೆ.

ಕಳೆದ ವರ್ಷ ವಾಡಿಕೆಗಿಂತ ತಡವಾಗಿ ರಾಜ್ಯಕ್ಕೆ ಆಗಮಿಸಿದ್ದ ಮಾನ್ಸೂನ್​ ಆರಂಭದಲ್ಲೇ ದುರ್ಬಲಗೊಂಡಿತ್ತು. ಇದರದಿಂದಾಗಿ ಕೃಷಿ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಭೀಕರ ಬರಗಾಲದಿಂದ ರೈತಾಪಿ ವರ್ಗ ಸಂಕಷ್ಟಕ್ಕೆ ಒಳಗಾಗಿತ್ತು. ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್​ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿತ್ತು. 2021ರ ಜೂನ್​ನಲ್ಲಿ ಮಾತ್ರ ವಾಡಿಕೆಯಷ್ಟೇ ಸುರಿದಿತ್ತು. 2023ರ ಜೂನ್​ನಲ್ಲಿಯೂ ಮೋಡವಿದ್ದರೂ ಮಳೆಯಾಗಲಿಲ್ಲ. ಹವಾಮಾನ ವೈಪರಿತ್ಯದಿಂದ ಕೆಲ ಸಂದರ್ಭದಲ್ಲಿ ದಿನದಲ್ಲಿ ಬೀಳುವ ಮಳೆ ಗಂಟೆಗೆ, ವಾರದಲ್ಲಿ ಬೀಳುವ ಮಳೆ ದಿನಕ್ಕೆ, ತಿಂಗಳಲ್ಲಿ ಬೀಳುವ ಮಳೆ ವಾರದಲ್ಲಿ ಬೀಳುತ್ತಿದೆ. ಈ ಬಾರಿ ರಾಜ್ಯದಲ್ಲಿ ಮುಂಗಾರು ಆಶಾದಾಯಕವಾಗಿದೆ. ಜೂನ್​ನಿಂದ ಸೆಪ್ಟೆಂಬರ್​ವರೆಗೆ ವಾಡಿಕೆ ಅಥವಾ ವಾಡಿಕೆಗಿಂತ ಹೆಚ್ಚು ಮಳೆ ಬೀಳಲಿದೆ. ಜೂನ್​ನಲ್ಲಿ ವಾಡಿಕೆಯಷ್ಟೇ ಮಳೆ ಸುರಿಯಲಿದೆ.ಜುಲೈನಿಂದ ಅಧಿಕವಾಗಲಿದೆ.

ಭರ್ಜರಿ ವರ್ಷಧಾರೆ: ಮಂಡ್ಯ, ಮೈಸೂರು, ಹಾಸನದಲ್ಲಿ ಜೂ 3ರಿಂದ ಜೂ 7ರವರೆಗೆ, ದಕ್ಷಿಣ ಕನ್ನಡ, ಬಾಗಲಕೋಟೆ, ಉಡುಪಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು, ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರಿನಲ್ಲಿ ಮುಂದಿನ 24 ಗಂಟೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್​ ಘೋಷಿಸಿದೆ. ಕೊಡಗಿನಲ್ಲಿ ಜೂ 4ರಂದು ಯೆಲ್ಲೋ ಅರ್ಲಟ್​ ಇರಲಿದೆ. ಉಳಿದೆಡೆ ಗುಡುಗು ಮಿಂಚು ಸಹಿತ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net