

ಭರತ್ ಶೆಟ್ಟಿಗಾರ್ ಮಂಗಳೂರು
ಕರಾವಳಿಯಲ್ಲಿ ಬಿರು ಬಿಸಿಲ ಬೇಸಿಗೆ ದಿನಗಳು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಬಿಸಿಲ ಧಗೆ ಇನ್ನಷ್ಟು ಹೆಚ್ಚಾಗಲಿದೆ. ಇದೇ ವೇಳೆ ಪೂರ್ವ ಮುಂಗಾರು ಮಳೆಯ ಆರಂಭಕ್ಕೂ ಕ್ಷಣಗಣನೆ ಶುರುವಾಗಿದೆ.
ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳ ಅಂತ್ಯದವರೆಗೆ ಸುರಿಯುವ ಮಳೆಯನ್ನು ಮುಂಗಾರು ಪೂರ್ವ ಅಥವಾ ಬೇಸಿಗೆ ಮಳೆ ಎಂದು ಗುರುತಿಸಲಾಗುತ್ತದೆ. ಈ ಅವಧಿಯಲ್ಲಿ ಸಾಯಂಕಾಲ-ರಾತ್ರಿ ವೇಳೆ ಹೆಚ್ಚಾಗಿ ಮಳೆ ಸುರಿಯುತ್ತದೆ. ಗುಡುಗು ಮಿಂಚಿನ ಅಬ್ಬರವೂ ಹೆಚ್ಚಿರುತ್ತದೆ. ಆಕಾಶದಲ್ಲಿ ದಟ್ಟ ಮೋಡ ಕವಿದು ಕರಾವಳಿಯ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಜೋರಾಗಿ ಸುರಿಯುತ್ತದೆ. ಇದರಿಂದ ನದಿಗಳಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಹರಿವು ಉಂಟಾಗಿ ಬೇಸಿಗೆಯ ನೀರಿನ ಕೊರತೆ ನೀಗಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ.
ಈ ಬಾರಿ ಪೂರ್ವ ಮುಂಗಾರಿನಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯ ಪಟ್ಟಿದೆ. ಕಳೆದ ಬಾರಿ ದಾಖಲೆಯ 9 ಚಂಡಮಾರುತಗಳಿಂದಾಗಿ ಮುಂಗಾರು ಅಬ್ಬರಿಸಿತ್ತಾದರೂ, ಪೂರ್ವ ಮುಂಗಾರು ಅವಧಿಯಲ್ಲಿ ಕರ್ನಾಟಕ ಕರಾವಳಿಗೆ ಸಂಬಂಧಿಸಿ ಯಾವುದೇ ಅರಬ್ಬಿ ಸಮುದ್ರದಲ್ಲಿ ಯಾವುದೇ ಚಂಡಮಾರುತ ಉಂಟಾಗಿರಲಿಲ್ಲ. ಈ ಬಾರಿ ಏಪ್ರಿಲ್ ತಿಂಗಳ ದ್ವಿತೀಯ ಭಾಗದಲ್ಲಿ ಅರಬ್ಬಿ ಸಮುದ್ರ ಸ್ವಲ್ಪಮಟ್ಟಿಗೆ ತಲ್ಲಣವಾಗುವ ಸಾಧ್ಯತೆಯಿದೆ. ಮೇ ತಿಂಗಳಲ್ಲಿ ಚಂಡಮಾರುತಗಳು ಉಂಟಾದರೂ, ಒಮಾನ್, ಸೊಮಾಲಿಯಾ ತೀರದತ್ತ ಸಾಗಲಿದೆ. ಈ ಅವಧಿಯಲ್ಲಿ ಸಾಮಾನ್ಯ ಮಳೆಯನ್ನು ಕಾಣಬಹುದು.
ಕಳೆದ ಬಾರಿ ಪೂರ್ವ ಮುಂಗಾರು ಕೊರತೆ
ಕಳೆದ ಬಾರಿ ಪೂರ್ವ ಮುಂಗಾರಿನಲ್ಲಿ ಸಾಕಷ್ಟು ಮಳೆಯಾಗಿಲ್ಲ. ಘಟ್ಟದ ತಪ್ಪಲಿನಲ್ಲಿ ಮಳೆಯಾಗಿರುವುದೂ ಮೇ ತಿಂಗಳ ದ್ವಿತೀಯಾರ್ಧದಲ್ಲಿ. ಹವಾಮಾನ ಇಲಾಖೆ ಅಂಕಿ ಅಂಶದ ಪ್ರಕಾರ 227.1 ಮಿ.ಮೀ. ವಾಡಿಕೆ ಮಳೆಯಲ್ಲಿ ದ.ಕ. ಜಿಲ್ಲೆಯಲ್ಲಿ 77.6 ಮಿ.ಮೀ. ಮಾತ್ರ ಮಳೆಯಾಗಿತ್ತು. ಶೇ.66ರಷ್ಟು ಮಳೆ ಕೊರತೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ 277.3 ವಾಡಿಕೆ ಮಳೆಯಲ್ಲಿ 14.4 ಮಿ.ಮೀ. ಮಾತ್ರ ಮಳೆ ಸುರಿದಿತ್ತು ಅಂದರೆ ಶೇ.94ರಷ್ಟು ಕಡಿಮೆ ಮಳೆಯಾಗಿತ್ತು.
40 ಡಿಗ್ರಿ ದಾಟಲಿದೆಯೇ ತಾಪಮಾನ?: ಕರಾವಳಿ ಭಾಗದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳಲ್ಲೇ 38 ಡಿಗ್ರಿ ವರೆಗೆ ತಲುಪಿದ್ದ ದಿನದ ಗರಿಷ್ಠ ತಾಪಮಾನ, ಮುಂದಿನ ದಿನಗಳಲ್ಲಿ 40 ಡಿಗ್ರಿ ದಾಟಲಿದೆಯೇ? ಹೌದು ಎನ್ನುತ್ತದೆ ಸ್ಕೈಮೆಟ್ ಹವಾಮಾನ ಸಂಸ್ಥೆ. ಕಳೆದೊಂದು ವಾರದಿಂದ ಮತ್ತೆ ದಿನದ ತಾಪಮಾನ ಹೆಚ್ಚಾಗುತ್ತಿದ್ದು, ಸಾಮಾನ್ಯಕ್ಕಿಂತ 4-7 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಫೆಬ್ರವರಿ ಅಂತ್ಯದಿಂದ ಕರ್ನಾಟಕ ಕರಾವಳಿ ಮತ್ತು ಕೇರಳದಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ತಲುಪಲಿದೆ ಎಂದು ಸಂಸ್ಥೆ ಖಚಿತ ಪಡಿಸಿದೆ.
ಕರಾವಳಿ ಭಾಗದಲ್ಲಿ ಈಗಾಗಲೇ 36-37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಮುಂದಕ್ಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪರಿಣಾಮ ಸಾಯಂಕಾಲ-ರಾತ್ರಿ ವೇಳೆ ಮಳೆಯಾಗಬಹುದು. ಮೇ ತಿಂಗಳಲ್ಲಿ ಸ್ವಲ್ಪ ಹೆಚ್ಚು ಮಳೆ ನಿರೀಕ್ಷಿಸಬಹುದಾಗಿದೆ. - ಸಿ.ಎಸ್.ಪಾಟೀಲ್, ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ