

ಬೆಂಗಳೂರು: ನಿಸರ್ಗ ಚಂಡಮಾರುತ ಮತ್ತಿತರ ಕಾರಣಗಳಿಂದಾಗಿ ರಾಜ್ಯದಲ್ಲಿ ಕೊಂಚ ಪ್ರಾಬಲ್ಯ ಕಳೆದುಕೊಂಡಿದ್ದ ಮುಂಗಾರು ಶುಕ್ರವಾರ ಕಳೆಕಟ್ಟಿದ್ದು, ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಇದೇ ಸಂದರ್ಭದಲ್ಲಿ ಪ್ರತ್ಯೇಕ ಮಳೆ ಸಂಬಂಧಿ ಅನಾಹುತಗಳಲ್ಲಿ ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕಳಸ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಗಾಜನೂರು ಜಲಾಶಯ ಭರ್ತಿಗೆ ಇನ್ನು ಅರ್ಧ ಮೀಟರ್ ಬಾಕಿ ಇದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ 81.14 ಮಿಮೀ ಮಳೆ ಬಿದ್ದಿದೆ. ವಿಜಯಪುರ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು ನರಸಲಗಿ ಬಳಿಯ ಹಳ್ಳದ ಸೇತುವೆ ಕುಸಿದು ಬಿದ್ದಿದೆ.
ಕರಾವಳಿಯಲ್ಲಿ ಜೂ 13ರಿಂದ 2 ದಿನ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಂದು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಎರಡು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ತೋಡಿಗೆ ಬಿದ್ದು ಬಾಲಕ ಸಾವು
ಮಂಗಳೂರು ತಾಲೂಕಿನ ಗುರುಪುರದ ಮಠದಗುಡೆ್ಡೆಯಲ್ಲಿ ಮನೆಯ ಕಾಂಪೌಂಡ್ ಕುಸಿದು ಬಿದ್ದು ನಾರಾಯಣ ನಾಯ್ಕ (52)ಮೃತಪಟ್ಟರೆ, ಉಡುಪಿ ಜಿಲ್ಲೆಯ ಹೆಬ್ರಿ ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿ, ಕಾನ್ಬೆಟ್ಟಿನ ಶ್ರೀಕಾಂತ ಭಟ್ (9) ಮನೆ ಎದುರಿನ ಮಳೆ ನೀರಿನಿಂದ ತುಂಬಿದ್ದ ತೋಡಿಗೆ ಬಿದ್ದು ಅಸುನೀಗಿದ್ದಾನೆ. ಕೋಲಾರ ಜಿಲ್ಲೆ ಕೊತ್ತೂರಿನಲ್ಲಿ ಗುರುವಾರ ರಾತ್ರಿ 10 ಗಂಟೆಯಲ್ಲಿ ಗಾಳಿಮಳೆಗೆ ಮನೆಗೋಡೆ ಕುಸಿದು ದಂಪತಿ ಹಾಗೂ ಮಗು ಗಾಯಗೊಂಡಿದ್ದಾರೆ.