2ನೇ ವಾರ್ಡಿನಲ್ಲಿ ಕೋತಿ, ನಾಯಿಗಳ ಹಾವಳಿ

2ನೇ ವಾರ್ಡಿನಲ್ಲಿ ಕೋತಿ, ನಾಯಿಗಳ ಹಾವಳಿ
Published on

ಹನೂರು: ಪಟ್ಟಣದ 2ನೇ ವಾರ್ಡಿನ ಎ.ಜೆ. ಕಾಲನಿಯಲ್ಲಿ ಬೀದಿ ನಾಯಿ ಹಾಗೂ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಓಡಾಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ನಾಯಿ ಹಾಗೂ ಕೋತಿಗಳನ್ನು ಸೆರೆ ಹಿಡಿದು ಬೇರೆಡೆ ಬಿಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ.

ಪಟ್ಟಣದಿಂದ ಲೊಕ್ಕನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಂತಿರುವ ಈ ಕಾಲನಿಯಲ್ಲಿ ಕಳೆದ 5 ತಿಂಗಳಿನಿಂದಲೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಹಿಂಡು ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ. ಸದ್ದು ಮಾಡಿದರೆ ಜನರ ಮೇಲೆ ಎರುಗುತ್ತಿದ್ದು, ಜನರನ್ನು ಭಯಭೀತಿಗೊಳಿಸುತ್ತಿದೆ. 3 ತಿಂಗಳ ಹಿಂದೆ ವಾರ್ಡಿನ ನಿವಾಸಿ ಸಣ್ಣಮ್ಮ ಎಂಬುವರ ಮೇಲೆ ನಾಯಿಯೊಂದು ಕಚ್ಚಿ ಗಾಯಗೊಳಿಸಿದ್ದು, ಆತಂಕವನ್ನು ಉಂಟು ಮಾಡಿತ್ತು. ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದ್ದರೂ ಕಿಂಚಿತ್ತೂ ಗಮನಹರಿಸಿಲ್ಲ. ಇದರಿಂದ ಮಕ್ಕಳು ಹಾಗೂ ವೃದ್ಧರು ಒಡಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಮನೆಯ ಮುಂಭಾಗ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಇತ್ತ ಕೋತಿಗಳ ಹಾವಳಿ ಸಹ ಮೀತಿಮೀರಿದ್ದು, ಹೆಂಚುಗಳನ್ನು ಹೊಡೆದು ಹಾಕಿ ಯಾರೂ ಇಲ್ಲದಿದ್ದ ವೇಳೆ ಮನೆಯೊಳಗೆ ನುಗ್ಗಿ ತಿಂಡಿ, ತಿನಿಸು ಹಾಗೂ ಆಹಾರ ಪದಾರ್ಥಗಳನ್ನು ಎತ್ತೊಯ್ಯುತ್ತಿವೆ. ದವಸ ಧಾನ್ಯಗಳನ್ನು ಚೆಲ್ಲಾಂಪಿಲ್ಲಿ ಮಾಡುತ್ತಿವೆ. ಪಾತ್ರೆಗಳನ್ನು ಬಿಸಾಡುತ್ತಿವೆ. ಗದರಿಸಿದರೆ ಗರ್ಜಿಸುತ್ತಾ ದಾಳಿ ಮಾಡಲು ಮುಂದಾಗುತ್ತಿವೆ. ಇದರಿಂದ ವಾರ್ಡಿನಲ್ಲಿ ನಾಯಿ ಹಾಗೂ ಕೋತಿಗಳ ಹಾವಳಿಯೇ ಒಂದು ದೊಡ್ಡ ಸಮಸ್ಯೆಯಾಗಿದ್ದು, ತುಂಬ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಪಪಂ ಅಧಿಕಾರಿಗಳು ವಾರ್ಡಿಗೆ ಆಗಮಿಸಿ ಪರಿಶೀಲಿಸಿ ನಾಯಿ ಹಾಗೂ ಕೋತಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಪಪಂ ಸದಸ್ಯ ಸುದೇಶ್ ಶನಿವಾರ ಪಪಂಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net