ಮುಷ್ಯ ಬರುತೈತಿ ಓಡೋ ಮಗಾ….

71
Published on

ಸಾಸ್ವೆಹಳ್ಳಿ: ಹೋಬಳಿಯ ಹೊಸಹಳ್ಳಿ ಗ್ರಾಮದಲ್ಲಿ ಕಳೆದ ಒಂದೆರಡು ತಿಂಗಳಿನಿಂದ ಮುಷ್ಯಗಳ ಉಪಟಳ ಹೆಚ್ಚಾಗಿದ್ದು, ಗ್ರಾಮದಲ್ಲಿ ಜನರು, ಮಕ್ಕಳು ಒಂಟಿಯಾಗಿ ಓಡಾಡುವುದೇ ದುಸ್ತರವಾಗಿದೆ.

ಗ್ರಾಮದಲ್ಲಿ 10 ರಿಂದ 15 ಸಂಖ್ಯೆಯ ಮುಷ್ಯಗಳ ಗುಂಪೊಂದು ಬೀಡುಬಿಟ್ಟಿದ್ದು, ಇವುಗಳ ಉಪಟಳಕ್ಕೆ ಮನೆಯ ಹೆಂಚು, ಡಿಶ್ ಬುಟ್ಟಿ, ಮನೆ ಬಳಿ ಬೆಳೆಯಲಾದ ಹಣ್ಣು, ತರಕಾರಿ, ಹೂವಿನಗಿಡ ಯಾವುದೂ ಉಳಿಯುತ್ತಿಲ್ಲ.

ಈ ಗುಂಪಿನ ಮುಷ್ಯವೊಂದು ಒಂಟಿಯಾಗಿ ಓಡಾಡುವ ಜನರ ಮೇಲೆ ದಾಳಿ ನಡೆಸುತ್ತಿದ್ದು, ಮಕ್ಕಳು ಶಾಲೆಗೆ ಹೋಗಿ ಬರುವುದು, ಆಟವಾಡುವುದು ಕಷ್ಟವಾಗಿದೆ. ಹಲವು ಬಾರಿ ಮೌಖಿಕವಾಗಿ ಸ್ಥಳೀಯ ಗ್ರಾಪಂಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಒಂದೆರಡು ದಿನಗಳಲ್ಲಿ ಈ ಮುಷ್ಯವನ್ನು ಹಿಡಿಸದಿದ್ದರೆ ಸ್ಥಳೀಯ ಗ್ರಾಪಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಕಳೆದ ತಿಂಗಳು ಗ್ರಾಮದ ಬಸವರಾಜಪ್ಪ ಎಂಬುವವರು ಸೇರಿ ನಾಲ್ವರು ಈ ಮುಷ್ಯದ ದಾಳಿಗೆ ತುತ್ತಾಗಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಕೂಡಲೇ ಸಂಬಂಧಿತರು ಅದನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಕಳೆದ ಬಾರಿ ಮುಷ್ಯ ಹಿಡಿದ ತಂಡವನ್ನು ಮತ್ತೆ ಕರೆಸುತ್ತಿದ್ದು, ಅವರು ಒಂದೆರಡು ದಿನಗಳಲ್ಲಿ ಬೋನು ಸಮೇತ ಗ್ರಾಮಕ್ಕೆ ಬರಲಿದ್ದಾರೆ. ಮುಷ್ಯ ಸೆರೆಹಿಡಿಯಲು ಸ್ಥಳೀಯ ತಂಡಗಳು ಇಲ್ಲದಿರುವುದು ಕಾರ್ಯಾಚರಣೆ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೊಸಹಳ್ಳಿ ಗ್ರಾಪಂ ಪಿಡಿಒ ಎಚ್.ಎಸ್.ಶಿವಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net