

ಮಂಗಳೂರು: ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಂಕಿಪಾಕ್ಸ್ ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳಿಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಯಿತು.
ಕೇರಳದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿರುವ ಕುರಿತಂತೆ ವಿವರಿಸಿದ ಜಿಲ್ಲಾಧಿಕಾರಿ, ಹೆಚ್ಚಿನ ಕೇರಳ ಪ್ರಯಾಣಿಕರು ಮಂಗಳೂರಿನ ವಿಮಾನ ನಿಲ್ದಾಣದಿಂದ ಕೇರಳಕ್ಕೆ ರಸ್ತೆ ಮಾರ್ಗವಾಗಿ ಸಂಚರಿಸುವುದರಿಂದ, ವಿಮಾನ ನಿಲ್ದಾಣ ಸಿಬ್ಬಂದಿಗೆ ಮಂಕಿ ಪಾಕ್ಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಏರ್‌ಲೈನ್ಸ್ ಸಿಬ್ಬಂದಿ ವಿಮಾನ ಲ್ಯಾಂಡಿಂಗ್ ಆಗುವ ಮೊದಲೆ ವಿಮಾನದಲ್ಲಿ ಜ್ವರ ಹಾಗೂ ಚರ್ಮದಲ್ಲಿ ಗುಳ್ಳೆಗಳು ಇರುವರನ್ನು ಪತ್ತೆ ಹಚ್ಚಬೇಕು. ಈ ಲಕ್ಷಣಗಳುಳ್ಳವರು ಕಂಡು ಬಂದರೆ ಅವರನ್ನು ಪ್ರತ್ಯೇಕಿಸಬೇಕು ಹಾಗೂ ವಿಮಾನ ನಿಲ್ದಾಣದಲ್ಲಿರುವ ಆರೋಗ್ಯಾಧಿಕಾರಿಗಳಿಂದ ತಪಾಸಣೆ ಮಾಡಿಸಬೇಕು. ಆಗಿಂದಾಗ್ಗೆ ಇದರ ಬಗ್ಗೆ ಮನವರಿಕೆ ಮಾಡಬೇಕು. ವಿಮಾನ ಲ್ಯಾಂಡ್ ಆದ ಮೇಲೆ ಪ್ರಯಾಣಿಕರನ್ನು ಮೇಲ್ವಿಚಾರಣೆ ಮಾಡುವ ಸಿಬ್ಬಂದಿಯೂ ಈ ಬಗ್ಗೆ ಪ್ರಯಾಣಿಕರಿಂದ ಖಚಿತ ಪಡಿಸಿಕೊಳ್ಳಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು (ಸಂಶಯಾಸ್ಪದ) ಪ್ರತ್ಯೇಕಿಸಿ ಆಂಬುಲೆನ್ಸ್ನಲ್ಲಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ತೆರೆಯಲಾದ ಮಂಕಿಪಾಕ್ಸ್ ಐಸೋಲೇಶನ್ ವಾರ್ಡ್‌ಗೆ ದಾಖಲಿಸುವಂತೆ ಸೂಚಿಸಿದರು.
ಮಂಕಿಪಾಕ್ಸ್ ಜಾಗೃತಿ ಮೂಡಿಸುವ ಕನ್ನಡ, ಮಲಯಾಳಂ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಐ.ಇ.ಸಿ ಸ್ಟ್ಯಾಂಡಿಗಳನ್ನು ಸಿದ್ಧಪಡಿಸಲು ಜಿಲ್ಲೆಯ ಕೋವಿಡ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಮಾಹಿತಿ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿ, ವಿಮಾನ ನಿಲ್ದಾಣದ ಅಧಿಕಾರಿಗಳು, ಸ್ಟ್ಯಾಂಡಿಗಳನ್ನು ತಯಾರಿಸಿ ವಿವಿಧ ಸ್ಥಳಗಳಲ್ಲಿ ಪ್ರರ್ದಶಿಸುವಂತೆ ಸೂಚಿಸಿದರು. ಅಧಿಕಾರಿ ಹಾಗೂ ಸಿಬ್ಬಂದಿ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಕುರಿತ ಫೋಟೋಗಳನ್ನು ಶೇರ್ ಮಾಡಲು ನಿಲ್ದಾಣ ಆರೋಗ್ಯಾಧಿಕಾರಿ ಹಾಗೂ ಏರ್‌ಲೈನ್ಸ್ ಅಧಿಕಾರಿಯವರಿಗೆ ನಿರ್ದೇಶನ ನೀಡಿದರು. ಕ್ಯಾಬ್ ಚಾಲಕರಿಗೆ ವಿಮಾನನಿಲ್ದಾಣದ ಅಧಿಕಾರಿಗಳು ಅರಿವು ಮೂಡಿಸಬೇಕು. ಡಿಜಿಟಲ್ ಡಿಸ್‌ಪ್ಲೇಯಲ್ಲಿ ಹಾಗೂ ಮೈಕ್ ಮೂಲಕವೂ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ರಾಜೇಶ್ ಬಿ.ವಿ., ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ಎಚ್., ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಕೆ., ವಿಮಾನ ನಿಲ್ದಾಣದ ಹೆಡ್ ಆಪರೇಷನ್ ಆಫೀಸರ್ ಶ್ರೀಕಾಂತ್ ಟಾಟಾ, ವಿಮಾನ ನಿಲ್ದಾಣ ವೈದ್ಯಾಧಿಕಾರಿ ಡಾ.ನಿಶಿತಾ, ಏರ್‌ಲೈನ್ಸ್ ಮುಖ್ಯಸ್ಥರು, ಕಸ್ಟಮ್ಸ್ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸಭೆಯಲ್ಲಿದ್ದರು.