

ಚನ್ನಗಿರಿ: ಪಟ್ಟಣದಲ್ಲಿ ಮಂಗಗಳ ಹಾವಳಿ ವಿಪರೀತವಾಗಿದ್ದು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕೂಲಿ ಕೆಲಸಕ್ಕೆ ಹೋಗುವವರು ತೀವ್ರ ತೊಂದರೆಗೊಳಗಾಗಿದ್ದಾರೆ. ಮಂಗಗಳ ಕಾಟದಿಂದ ಬೇಸತ್ತ ಜನರು ಪುರಸಭೆಗೆ ಮನವಿ ಸಲ್ಲಿಸಿ, ಅವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಮುಂಗಾರಿನಲ್ಲಿ ಉತ್ತಮ ಮಳೆಯಾಗಿ, ಕಾಡುಗಳಲ್ಲಿ ಕೆರೆಕಟ್ಟೆಗಳು ತುಂಬಿ, ಹಸಿರಿನಿಂದ ಕಂಗೊಳಿಸುತ್ತಿದ್ದರೂ, ಕಾಡಿನಲ್ಲಿ ಆಹಾರದ ಕೊರತೆಯಿಂದಾಗಿ ಮಂಗಗಳು ನಾಡಿಗೆ ಲಗ್ಗೆ ಇಟ್ಟಿವೆ. ಹೊಟ್ಟೆ ತುಂಬಿಸಿಕೊಳ್ಳಲು ಮನೆಗಳು, ಅಂಗಡಿಗಳು ಮತ್ತು ಬೀದಿಬದಿಯ ಅಂಗಡಿಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ವಿಶೇಷವಾಗಿ, ಸರ್ಕಾರಿ ಕಚೇರಿಗಳಿಗೂ ನುಗ್ಗುತ್ತಿರುವ ಮಂಗಗಳು, ಕರ್ತವ್ಯ ನಿರತ ಅಧಿಕಾರಿಗಳ ತಲೆ ಮೇಲೆ ಕುಳಿತುಕೊಳ್ಳುವಂತಹ ವಿಚಿತ್ರ ಘಟನೆಗಳು ನಡೆಯುತ್ತಿವೆ.
ಪಟ್ಟಣಕ್ಕೆ ಕೇವಲ 5 ಕಿ.ಮೀ. ದೂರದಲ್ಲಿ ಕಾಡಿರುವುದರಿಂದ ಮಂಗಗಳು ಹಿಂಡಾಗಿ ಬರಲಾರಂಭಿಸಿವೆ. ಕುಡಿಯುವ ನೀರು ಮತ್ತು ಆಹಾರಕ್ಕಾಗಿ ನಾಡಿಗೆ ಬರುತ್ತಿರುವ ಇವು, ತಮ್ಮ ದಾರಿಗೆ ಅಡ್ಡವಾಗಿ ಹೋಗುವವರ ಮೇಲೆ ದಾಳಿ ಮಾಡುತ್ತಿವೆ. ಮನೆ ಬಾಗಿಲು ತೆರೆದು ಸ್ವಲ್ಪಕಾಲ ಹೊರಗೆ ಹೋದರೆ ಸಾಕು, ಗುಂಪಾಗಿ ಒಳಗೆ ನುಗ್ಗಿ ಅಕ್ಕಿ, ಬೇಳೆ, ಆಹಾರ ಪದಾರ್ಥಗಳನ್ನು ಕೊಂಡೊಯ್ಯುತ್ತವೆ. ಮನೆಯಲ್ಲಿದ್ದ ಸಾಮಾನುಗಳನ್ನು ಬೀಳಿಸಿ ಅಸ್ತವ್ಯಸ್ತಗೊಳಿಸುತ್ತವೆ. ಮರಿಗಳನ್ನು ಹೊಂದಿರುವ ಮಂಗಗಳನ್ನು ಓಡಿಸಲು ಹೋದಾಗಂತೂ ಅವು ಮೈಮೇಲೆ ಬರುತ್ತವೆ ಎಂದು ನಾಗರಿಕರು ಅಳಲು ತೋಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಮನೆಯಿಂದ ಹೊರಗೆ ಹೋಗುವಾಗ ಏಕಾಏಕಿ ಬಂದು ಡಿಕ್ಕಿ ಹೊಡೆದು ಬೀಳಿಸಿ ಹೋಗುತ್ತವೆ. ಅಲ್ಲದೆ, ಮನೆಯಲ್ಲಿ ಒಬ್ಬರೇ ಇರುವಾಗ ನಾಲ್ಕಾರು ಮಂಗಗಳು ನುಗ್ಗಿ ದಾಂಧಲೆ ನಡೆಸಿ, ಆಹಾರ ಪದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಹೋಗುತ್ತವೆ. ಹೀಗಾಗಿ ಮನೆಯವರು ಹಗಲಿನಲ್ಲಿ ಕೋಲು ಹಿಡಿದು ಅವುಗಳನ್ನು ಓಡಿಸುವಂತಾಗಿದೆ.
ಮಂಗಗಳಿಗೆ ಅರಣ್ಯದಲ್ಲಿ ನೀರು ಮತ್ತು ಆಹಾರ ಸಿಗದೆ ನಾಡಿಗೆ ಬಂದಿವೆ. ಅವು ಯಾರಿಗೂ ತೊಂದರೆ ಮಾಡುವುದಿಲ್ಲ. ಅವುಗಳಿಗೆ ತೊಂದರೆಯಾದಾಗ ಮಾತ್ರ ಮೈಮೇಲೆ ಬರುತ್ತವೆ. ಪುರಸಭೆಯವರು ಮಂಗಗಳನ್ನು ಹಿಡಿಯುವ ಕೆಲಸ ಮಾಡಬೇಕು. ಪುರಸಭೆಯವರು ನಮ್ಮ ಬಳಿ ಸಹಾಯ ಕೇಳಿದರೆ, ಮಾರ್ಗದರ್ಶನ ನೀಡಲು ಸಿದ್ಧರಿದ್ದೇವೆ. | ಎಸ್. ಶ್ವೇತಾ, ವಲಯ ಅರಣ್ಯಾಧಿಕಾರಿ ಪಟ್ಟಣದಲ್ಲಿ ಮಂಗಗಳ ಕಾಟ ಅಧಿಕವಾಗಿದೆ. 2013ರಲ್ಲಿ ಪುರಸಭೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಪಡೆದು ಮಂಗಗಳನ್ನು ಹಿಡಿದು ಅರಣ್ಯಕ್ಕೆ ಬಿಡಲಾಗಿತ್ತು. ಇದರಂತೆ ಪುರಸಭೆಯವರು ಮಂಗಳನ್ನು ಹಿಡಿದು ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಬೇಕು. | ಪಟ್ಲಿ ನಾಗರಾಜ್, ಪುರಸಭೆ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ